ಕೋಲಾರ: ತಾಲ್ಲೂಕಿನ ನಾಲ್ಕು ಶಾಲೆಗಳಲ್ಲಿ ರಾಜ್ಯದಲ್ಲೇ ಪ್ರಾಯೋಗಿಕವಾಗಿ ಆರಂಭಿಸಲಾಗಿರುವ ಬುಧವಾರದ ಸಿರಿಧಾನ್ಯದ ಬಿಸಿಯೂಟ ಸವಿದ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದನ್ನು ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಡಿಡಿಪಿಐ ಕೆ.ರತ್ನಯ್ಯ ತಿಳಿಸಿದರು. ತಾಲ್ಲೂಕಿನ ಕಾಳಹಸ್ತಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಯಾರಿಸಿದ್ದ ನವಣೆ,ಸಾಮೆಯ ಬಿಸಿಬೇಳೆಬಾತ್ಅನ್ನು ಮಕ್ಕಳೊಂದಿಗೆ ಸವಿದು ಅವರು ಮಾತನಾಡಿ, ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ 10 ಬುಧವಾರಗಳಂದು ಸಿರಿಧಾನ್ಯದ ಬಿಸಿಯೂಟ ನೀಡಿ ಅದರ ಸಾಧಕಬಾಧಕಗಳನ್ನು ಗಮನಿಸಲು ಮುಂದಾಗಿದೆ ಎಂದರು.
ಮಕ್ಕಳಿಗೆ ಹೆಚ್ಚಿನ ಪೌಷ್ಟಿಕಾಂಶಭರಿತ ಆಹಾರ ನೀಡುವ ಉದ್ಧೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದ ಅವರು, ಪ್ರತಿ ಬುಧವಾರದಂದು ಮಾತ್ರ ಸಿರಿಧಾನ್ಯಗಳ ಊಟ ನೀಡಲಿದ್ದು, ಇದನ್ನು 10 ಬುಧವಾರಗಳಂದು ನೀಡಿದ ನಂತರ ಮಕ್ಕಳಿಂದ ಪ್ರತಿಕ್ರಿಯೆ ಪಡೆದು ಇಡೀ ರಾಜ್ಯಕ್ಕೆ ವಿಸ್ತರಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.ಮಕ್ಕಳನ್ನು ಕಾಡುವ ಅಪೌಷ್ಟಿಕತೆಯನ್ನು ಗಮನಿಸಿರುವ ಸರ್ಕಾರ ಮಧ್ಯಾಹ್ನದ ಬಿಸಿಯೂಟದಲ್ಲಿ ಬದಲಾವಣೆ ತರಲು ಬಯಸಿದೆ, ಇದರಲ್ಲಿ ಸಿರಿಧಾನ್ಯಗಳ ಬಳಕೆಯೂ ಒಂದಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇದೆ, ರೋಗ ನಿರೋಧಕ ಶಕ್ತಿ ಇದರಲ್ಲಿಹೆಚ್ಚಿರುವುದರಿಂದ ಅನೇಕರು ಇದನ್ನು ಬಳಸಲು ಮುಂದಾಗಿದ್ದಾರೆ ಎಂದ ಅವರು, ಕೆಲವು ಹೋಟೆಲ್ಗಳಲ್ಲಿ ಸಿರಿಧಾನ್ಯಗಳ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದರು.
ರಾಜ್ಯವ್ಯಾಪಿವಿಸ್ತರಣೆಗೆ ಚಿಂತನೆ-ಮಂಜುನಾಥ್ಬಿಸಿಯೂಟ ಯೋಜನೆಯ ರಾಜ್ಯ ಸಹಾಯಕ ನಿರ್ದೇಶಕ ಮಂಜುನಾಥ್, ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಪ್ರಾಯೋಗಿಕವಾಗಿ ಕೈಗೊಳ್ಳಲು ಕೋಲಾರ ತಾಲ್ಲೂಕಿನ ವಡಗೂರು, ಟಮಕ,ಕಾಳಹಸ್ತಿಪುರ, ಕುಂಬಾರಹಳ್ಳಿಯ ನಾಲ್ಕು ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಮಕ್ಕಳು,ಪೋಷಕರ ಪ್ರತಿಕ್ರಿಯೆ ಗಮನಿಸಿದ ನಂತರ ರಾಜ್ಯವ್ಯಾಪಿ ವಿಸ್ತರಿಸಲು ಚಿಂತನೆ ನಡೆಸಿದೆ ಎಂದರು.
ಸರ್ಕಾರದ ಬಹು ನಿರೀಕ್ಷಿತ ಈ ಪ್ರಯೋಗಾತ್ಮಕ ಕಾರ್ಯಕ್ರಮ ಅತ್ಯುತ್ತಮ ರೀತಿಯಲ್ಲಿ ಯಶಸ್ವಿಗೊಳಿಸಲು ಹೆಚ್ಚಿನ ನಿಗಾವಹಿಸಲಾಗಿದೆ ಎಂದ ಅವರು, 2ನೇ ಬುಧವಾರವೂ 4 ಶಾಲೆಗಳಿಗೆ ಭೇಟಿ ನೀಡಿ ಊಟ ತಿಂದ ನಂತರ ಮಕ್ಕಳಿಂದ ಊಟದ ರುಚಿ, ಅವರ ಅನಿಸಿಕೆಗಳನ್ನು ದಾಖಲಿಸಿಕೊಂಡಿರುವುದಾಗಿ ತಿಳಿಸಿದರು.

ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಲು ಮತ್ತು ಉತ್ತಮ ಆರೋಗ್ಯಕ್ಕೆ ಇಂದು ಸಿರಿಧಾನ್ಯಗಳ ಬಳಕೆಗೆ ಒತ್ತು ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಈ ಯೋಜನೆ ಯಶಸ್ಸಿಗೆ ಸಹಕರಿಸಿ ಎಂದರು. ಪೈಲೆಟ್ ಯೋಜನೆಯಡಿ ಆಯ್ಕೆಯಾದ ಶಾಲೆಗಳ ಮುಖ್ಯ ಶಿಕ್ಷಕರು ಮಕ್ಕಳಿಗೆ ಸಿರಿಧಾನ್ಯಗಳ ಮಹತ್ವವನ್ನು ತಿಳಿಸಿಕೊಟ್ಟು ಅದನ್ನು ಮಕ್ಕಳು ಖುಷಿಯಿಂದ ತಿನ್ನಲು ವ್ಯವಸ್ಥೆ ಮಾಡಿ ಎಂದು ತಾಕೀತು ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ಹಿಂದೆ ನಮ್ಮ ಪೂರ್ವಜರು ಸಿರಿಧಾನ್ಯಗಳ ಆಹಾರ ಸೇವಿಸಿಯೇ ಆಸ್ಪತ್ರೆಗಳಿಂದ ದೂರವಿದ್ದರು, ದೃಢಕಾಯರಾಗಿದ್ದು, ಆರೋಗ್ಯವಂತರಾಗಿದ್ದರು ಎಂದು ಅಭಿಪ್ರಾಯಪಟ್ಟ ಅವರು, ಇಂದು ಮತ್ತೆ ಸಮಾಜದಲ್ಲಿ ಆಹಾರ ಪದ್ದತಿ ಬದಲಾವಣೆಯಾಗುತ್ತಿದೆ, ಅದಕ್ಕೆ ತಕ್ಕಂತೆ ನಮ್ಮ ಮಕ್ಕಳಿಗೂ ಈ ಪೌಷ್ಟಿಕಾಂಶ ಭರಿತ ಆಹಾರ ನೀಡುವ ಉದ್ದೇಶ ಸರ್ಕಾರ ಹೊಂದಿದೆ ಎಂದು ತಿಳಿಸಿದರು.
ಸಿರಿಧಾನ್ಯಗಳ ಬಿಸಿಯೂಟ ಯೋಜನೆ ಚಾಲನೆಗೆ ಕೋಲಾರ ಜಿಲ್ಲೆಯನ್ನೇ ಮತ್ತು ಅದರಲ್ಲೂ ಕೋಲಾರ ತಾಲ್ಲೂಕನ್ನೇ ಮೊದಲು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಇಲಾಖೆಯ ಅಧಿಕಾರಿಗಳಿಗೆ ಅವರು ಧನ್ಯವಾದ ಸಲ್ಲಿಸಿದರು.
ಬಿಸಿಯೂಟ ಯೋಜನೆಯ ಜಿಲ್ಲಾ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಅಡುಗೆ ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಿ, ಶುದ್ದತೆ,ರುಚಿ,ಶುಚಿಗೆ ಆದ್ಯತೆ ನೀಡಿ, ಸಮವಸ್ತ್ರವನ್ನು ಕಡ್ಡಾಯವಾಗಿ ಬಳಸಿ, ನಿಮ್ಮ ಮನೆ ಮಕ್ಕಳೆಂದು ಭಾವಿಸಿ ಅಡುಗೆ ತಯಾರಿಸಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆ ತಾಲ್ಲೂಕು ಸಹಾಯಕ ನಿರ್ದೇಶಕ ಬಾಲಾಜಿ, ವಿಷಯ ಪರಿವೀಕ್ಷಕ ಕೃಷ್ಣಪ್ಪ, ಇಸಿಒ ಆರ್ ಶ್ರೀನಿವಾಸನ್, ಸಿಆರ್ಪಿಗಳಾದ ಸುಜಾತಾ, ಗಂಗಾಧರ್, ಮುಖ್ಯಶಿಕ್ಷಕರಾದ ಮುನಿನಾರಾಯಣಪ್ಪ, ರಾಜೇಂದ್ರಾಚಾರಿ ಜಯಲಕ್ಷ್ಮಮ್ಮ ವಾಣಿಶ್ರೀ ಹಾಜರಿದ್ದರು.
ಚಿತ್ರಶೀರ್ಷಿಕೆ;(ಫೋಟೊ-31ಕೋಲಾರ1)ಕೋಲಾರ ಜಿಲ್ಲೆಯ ಕಾಳಹಸ್ತಿಪುರ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಇಡೀ ರಾಜ್ಯದಲ್ಲೇ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು,2ನೇ ಬುಧವಾರ ಊಟದ ರುಚಿ ಸವಿದು ಮಕ್ಕಳ ಅನಿಸಿಕೆ ಕೇಳಿ ದಾಖಲಿಸಿದ ಡಿಡಿಪಿಐ ರತ್ನಯ್ಯ ಹಾಗೂ ಬಿಸಿಯೂಟ ರಾಜ್ಯ ಸಹಾಯಕ ನಿರ್ದೇಶಕ ಮಂಜುನಾಥ್ ಮತ್ತಿತರರು.

