ಶ್ರೀನಿವಾಸಪುರ : ಮನೆಯಲ್ಲಿ ಬೀಳುವ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರು ತರುವ ವಾನದಲ್ಲಿ ಹಾಕಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಹೇಳಿದರು.ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸಮರ್ಪಕ ಕಸ ವಿಲೇವಾರಿ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿರು.ಪಟ್ಟಣದ ಒಂದು ವಾರ್ಡ್‌ನಲ್ಲಿ ಈ ಬಗ್ಗೆ ಮಾದರಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇತರ ವಾರ್ಡ್‌ಗಳ ನಾಗರಿಕರು ಅನುಕರಣ ಯೋಗ್ಯ ಮಾದರಿಯನ್ನು ಅನುಸರಿಸಬೇಕು ಎಂದು ಹೇಳಿದರು.
ಪುರಸಭೆಯ ಸ್ವಚ್ಛತಾ ರಾಯಭಾರಿ ಟಿ.ಎಸ್.ಮಾಯಾ ಬಾಲಚಂದ್ರ ಮಾತನಾಡಿ, ನಾಗರಿಕರು ಅನುಪಯುಕ್ತ ಪ್ಲಾಸ್ಟಿಕ್ ಸುಡುವ ಪರಿಪಾಠ ಬಿಡಬೇಕು. ಪ್ಲಾಷ್ಟಿಕ್ ಸುಡುವುದರಿಂದ ಜನ, ಜಾನುವಾರು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇಂದು ಪ್ಲಾಸ್ಟಿಕ್ ಸಮುದ್ರವನ್ನೂ ಮಾಲಿನ್ಯಗೊಳಿಸಿದೆ. ತಿನ್ನುವ ಉಪ್ಪಿನಲ್ಲೂ ಪ್ಲಾಸ್ಟಿಕ್ ಕಣಗಳು ಸೇರಿಕೊಂಡಿವೆ. ಗಾಳಿ ಹಾಗೂ ಮಳೆ ನೀರಿನಲ್ಲೂ ಪ್ಲಾಸ್ಟಿಕ್ ಹಾವಳಿ ಹೆಚ್ಚಿದೆ ಎಂದು ಹೇಳಿದರು. ನಾಗರಿಕರು ಪರಿಸರ ಸ್ನೇಹಿಯಲ್ಲದ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಲ್ಲಿಸಬೇಕು. ಬಟ್ಟೆ ಬ್ಯಾಗ್ ಸಂಸ್ಕೃತಿಯನ್ನು ಮತ್ತೆ ಪ್ರಾರಂಭಿಸಬೇಕು. ಇಲ್ಲವಾದರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದು ಹೇಳಿದರು.
ಪುರಸಭಾ ಸದಸ್ಯ ಬಿ.ವೆಂಕಟರೆಡ್ಡಿ ಮಾತನಾಡಿ, ಇದೊಂದು ಉಪಯುಕ್ತ ಕಾರ್ಯಕ್ರಮ. ಕಾರ್ಯಾಗಾರದಲ್ಲಿ ತಿಳಿದುಕೊಂಡ ವಿಷಯಗಳನ್ನು ಕಾರ್ಯರೂಪಕ್ಕೆ ತರಬೇಕು. ಪಟ್ಟಣದ ನೈರ್ಮಲ್ಯ ಕಾಪಾಡಬೇಕು. ಕಸದಿಂದ ಉಂಟಾಗುವ ಸಂಕಷ್ಟ ನಿವಾರಣೆಗೆ ನಾಗರಿಕರು ಸಹಕರಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮರ್ಪಕ ಕಸ ವಿಲೇವಾರಿ ಬಗ್ಗೆ ವೀಡಿಯೋ ಪ್ರದರ್ಶನ ಏರ್ಪಡಿಸಲಾಗಿತ್ತು. ವಿಪ್ರ ಮಹಿಳಾ ಮಂಡಳಿ ವತಿಯಿಂದ ಖಾದಿಯಿಂದ ತಯಾರಿಸಿದ ಕೈ ಚೀಲಗಳನ್ನು ಬಿಡುಗಡೆ ಮಾಡಿ, ಉಚಿತವಾಗಿ ವಿತರಿಸಲಾಯಿತು. ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗವೇಣಿ ರೆಡ್ಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ವಿಶ್ವನಾಥ್, ಪುರಸಭೆ ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್, ಪೃಥ್ವಿರಾಜ್, ಪರಿಸರ ಅಭಿಯಂತರ ಡಿ.ಶೇಖರ್ ರೆಡ್ಡಿ, ಎಂಜಿನಿಯರ್ ಶ್ರೀನಿವಾಸ್, ಶಾರದ, ವನಜಾಕ್ಷಿ, ಕಲಾ ಶಂಕರ್ ಇದ್ದರು.


