ಕೋಲಾರ : ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ಕೋಟಿ ಐವತ್ತು ಲಕ್ಷ ವೆಚ್ಚದ 5 ಲಕ್ಷ ನೋಟ್ ಉಸ್ತಕಗಳನ್ನು ಆಗಸ್ಟ್ ಒಂದರಂದು ಸ್ಯಾಮ್‍ಸಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ವಿತರಿಸಲಾಗುವುದೆಂದು ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಸಂತೋಷ್ ಉಪಾದ್ಯ ತಿಳಿಸಿದರು. ಜಿಲ್ಲೆಗೆ ಬುಧವಾರ ಭೇಟಿ ನೀಡಿದ್ದ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹನಾಧಿಕಾರಿ ಗಳೊಂದಿಗೆ ಚರ್ಚಿಸಿ ಮಾತನಾಡುತ್ತಿದ್ದರು.
ಜಿಲ್ಲೆಯ ಒಂದರಿಂದ ಹತ್ತನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ 82 ಸಾವಿರ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಲಭಿಸಲಿದ್‍ದು, ಇದರ ಸದುಪಯೋಗ ಪಡೆಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದರು. ಈಗಾಗಲೇ ಕಳೆದ ಐದು ವರ್ಷಗಳಿಂದ ಇದೇ ರೀತಿ ಸೇವೆಯನ್ನು ಸ್ಯಾಮ್‍ಸಂಗ್ ಇಂಡಿಯಾ ನೋಡುತ್ತಿದ್ದು, ಚಿಕ್ಕಬಳ್ಳಾಪುರದ 100 ಶಾಲೆಗಳಿಗೆ ಹಾಗೂ ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಪಠ್ಯಕ್ರಮ ಅಳವಡಿಸಿರುವ ಟ್ಯಾಬ್‍ಗಳನ್ನು ವಿತರಿಸುವ ಚಿಂತನೆ ನಡೆಸಿದ್ದು, ಇದೇ ರೀತಿ ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ಜಿಲ್ಲೆಯ ಕ್ಯಾಸಂಬಳ್ಳಿ ಅಥವಾ ತುಮಕೂರಿನ ಗುಬ್ಬಿಯಲ್ಲಿ ನೂತನ ಶಾಲಾ ಕಟ್ಟಡ ಕಾಮಗಾರಿಯನ್ನು ಆರಂಭಿಸುವ ಚರ್ಚೆ ನಡೆದಿದೆ ಎಂದರು.ಜಿಲ್ಲಾಧಿಕಾರಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಭೇಟಿ ಮಾಡಿದ ನಿಯೋಗದಲ್ಲಿ ಶಿಕ್ಷಕ ಬಳಗದ ಅಧ್ಯಕ್ಷ ಎಸ್. ನಾರಾಯಣಸ್ವಾಮಿ, ಕೋಶಾಧ್ಯಕ್ಷ ಚಂದ್ರಪ್ಪ, ಶಿಕ್ಷಣ ಸಂಯೋಜಕ ಆರ್. ಶ್ರೀನಿವಾಸನ್, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಜಿ. ಶ್ರೀನಿವಾಸ್ ಉಪಸ್ಥಿತರಿದ್ದರು.
