ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 201-20 ನೇ ಶೈಕ್ಷಣಿಕ ವರ್ಷದ ಶಿಕ್ಷಕ – ರಕ್ಷಕ ಸಂಘದ ಪ್ರಥಮ ಮಹಾಸಭೆಯು ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ಧ ಸಂಚಾಲಕ ಪ್ರಹ್ಲಾದ್ ಜೆ.ಶೆಟ್ಟಿ ಮಾತನಾಡಿ “ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಸಂಸ್ಥೆಯು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಪೋಷಕರ ಸ್ಪಂದನೆ ಅತೀ ಅಗತ್ಯ” ಎಂದರು.

ಆಡಳಿತಾಧಿಕಾರಿ ಸಿ. ಶ್ರೀಧರ್ ಮಾತನಾಡಿ “ ವಿದ್ಯಾಭ್ಯಾಸವು ಕೇವಲ ಅಂಕಗಳಿಕೆಯ ಉದ್ದೇಶಕ್ಕೆ ಮಾತ್ರ ಸೀಮಿತವಾಗದೆ ಸಾಮಾಜಿಕ ಪ್ರಜ್ಞೆಯ ಜಾಗೃತಿಗೂ ಕಾರಣವಾಗಬೇಕು. ಶಿಕ್ಷಕರು ಮಗುವಿನ ಅಭಿವ್ಯಕ್ತಿಗೆ ಹೆಚ್ಚು ಒತ್ತು ನೀಡಿ, ಸೃಜನೆಶೀಲತೆಯನ್ನು ಬೆಳೆಸಬೇಕು” ಎಂದರು.
ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಆಳ್ವ ಅವರು “ ಶಿಸ್ತಿಗೆ ಮಾದರಿಯಾದ ವಿದ್ಯಾಸಂಸ್ಥೆ ನಮ್ಮದು . ಮಕ್ಕಳ ಶಿಸ್ತುಬದ್ಧ ನಡವಳಿಕೆಯಲ್ಲಿ ಪೋಷಕರ ಪಾತ್ರ ಹಿರಿದಾದುದು. ಆಡಳಿತ ಮಂಡಳಿ, ಶಿಕ್ಷಕ ವರ್ಗದೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು , ಮಕ್ಕಳ ಭವಿಷ್ಯವನ್ನು ರೂಪಿಸೋಣ” ಎಂದು ಹೆತ್ತವರಿಗೆ ಕರೆನೀಡಿದರು.
ಪೋಷಕರ ಪರವಾಗಿ ಮಾತನಾಡಿದ ಕಾರ್ಯಕಾರಿ ಸಮಿತಿಯ ಸದಸ್ಯೆ ಕಸ್ತೂರಿ ಪಿ. ಶೆಟ್ಟಿ “ ಹೆತ್ತವರು ಮಕ್ಕಳ ಜೊತೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಅವರ ಭಾವನೆಗಳಿಗೆ ಸ್ಪಂದಿಸಬೇಕು. ವಿಪರೀತ ಕಟ್ಟುಪಾಡುಗಳನ್ನು ವಿಧಿಸದೆ, ಪ್ರೀತಿ ವಿಶ್ವಾಸದಿಂದ ಮಕ್ಕಳನ್ನು ಬೆಳೆಸಬೇಕು” ಎಂದರು.
ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಸ್.ನ್ಯಾಕ್, ಕಾರ್ಯದರ್ಶಿ ಕೆ ನಾರಾಯಣ ಶೆಟ್ಟಿ ಕೊಂಬಿಲ, ಟ್ರಸ್ಟಿ ಪುಪ್ಪರಾಜ ಹೆಗ್ಡೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ.ವಿ,ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್ ಪಿ ಸಲ್ದಾನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಮತ್ತು ವಿಶಿಷ್ಟ ಶ್ರೇಣಿ ಪಡೆದ ಸುರಕ್ಷಾ ಸಾಲ್ಯಾನ್ ಳನ್ನು ಶಾಲು ಹೊದಿಸಿ , ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಉಳಿದ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರಾದ ಮೋಹನ್.ಪಿ,ಎಸ್ ಗತವರ್ಷದ ಸಭೆಯ ವರದಿ ಮಂಡಿಸಿದರು. ಶಾಲಿನಿ ಲೆಕ್ಕಪತ್ರ ಮಂಡಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯೆ ಶಿಫಾಲಿ ರೈ ಸ್ವಾಗತಿಸಿ , ಶಿಕ್ಷಕಿ ಯಶೋಧ ಕೆ. ವಂದಿಸಿದರು. ಶಿಕ್ಷಕಿ ಯಜ್ಞೇಶ್ವರಿ ಕಾರ್ಯಕ್ರಮ ನಿರೂಪಿಸಿದರು.
