ವಾಮಂಜೂರು : ವಾಮಂಜೂರು ತಿರುವೈಲು ಗ್ರಾಮದ ಚೆಕ್‍ಪೋಸ್ಟ್ ಬಳಿ ದಕ ಜಿಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಆರ್‍ಪಿಎಲ್ ಕಂಪೆನಿಯ ಸಾಮಾಜಿಕ ಜವಾಬ್ದಾರಿಯಡಿ 26.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡದ `ನೇತ್ರಾವತಿ ಮತ್ತು ಫಲ್ಗುಣಿ’ ತರಗತಿ ಕೊಠಡಿಗಳ ಉದ್ಘಾಟನೆ ಶಾಸಕ ಡಾ. ಭರತ್ ಶೆಟ್ಟಿ ನೆರವೇರಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಡಾ. ಶೆಟ್ಟಿ, ಪುಟಾಣಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಗಳ ಉಳಿಸಲು ಸಮಾಜ ನಡೆಸುತ್ತಿರುವ ಇಂತಹ ನಿಸ್ವಾರ್ಥ ಪ್ರಯತ್ನ ನಿಜಕ್ಕೂ ಅಭಿನಂದನೀಯ. ಪೋಷಕರು ತಮ್ಮ ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸಬೇಕು. ಮನೆ, ಶಾಲೆ ಮತ್ತು ಪರಿಸರ ಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಈ ಮೂರೂ ಕ್ಷೇತ್ರ ಆರೋಗ್ಯಕರವಾಗಿರಬೇಕು. ಮಕ್ಕಳಿಗೆ ಉತ್ತಮ ಸಂಸ್ಕøತಿ ನೀಡುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರಲ್ಲಿದೆ ಎಂದರು.
ಮುಖ್ಯ ಅತಿಥಿ ಎಂಆರ್‍ಪಿಎಲ್ ಮುಖ್ಯ ಮಹಾ ಪ್ರಬಂಧಕ(ಚೀಫ್ ಜನರಲ್ ಮ್ಯಾನೇಜರ್) ವಿಜೇಂದ್ರ ಭಟ್ ಮಾತನಾಡುತ್ತ, ಜೀವನದಲ್ಲಿ ಶಿಕ್ಷಣಕ್ಕೆ ಮಹತ್ವದ ಸ್ಥಾನವಿದೆ. ಶಿಕ್ಷಣದಿಂದ ಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಸಾಧ್ಯ. ಕಂಪೆನಿಯು ತನ್ನ ಸಾಮಾಜಿಕ ಜವಾಬ್ದಾರಿಯಡಿ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡುತ್ತ ಬಂದಿದೆ. ಕಳೆದ ಬಾರಿ ಜಿಲ್ಲೆಯ 150 ಶಾಲೆಗಳ 3,050 ವಿದ್ಯಾರ್ಥಿಗಳಿಗೆ ಕಂಪೆನಿ ಸ್ಕಾಲರ್‍ಶಿಪ್ ನೀಡಿದೆ ಎಂದು ಹೇಳಿದರು.
ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡುತ್ತ, ಮಕ್ಕಳ ಶಿಕ್ಷಣ ಚಿವುಟುವ ಬದಲು ಅರಳಿಸುವ ಕೆಲಸ ಮಾಡಬೇಕು. ಸರ್ಕಾರಿ ಶಾಲೆ ಎಂಬ ಕೀಳರಿಮೆ ಬೇಡ. ಇಲ್ಲಿ ಕಲಿತವರು ನಿಸ್ಸಂದೇಹವಾಗಿ ಸಮಾಜದಲ್ಲಿ ಉನ್ನತ ಸ್ಥಾನ ಗಿಟ್ಟಿಸಿಕೊಳ್ಳಬಹುದು. ಆದರೆ ಅದಕ್ಕಾಗಿ ಈಗಿಂದೀಗಲೇ ಪ್ರಯತ್ನಿಸಬೇಕು. ಇಲ್ಲಿ ಈಗ ಆಂಗ್ಲ ಮಾಧ್ಯಮವೂ ಬಂದಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಎಂಆರ್‍ಪಿಎಲ್ ಅಧಿಕಾರಿ ವಿಜೇಂದ್ರ ಭಟ್‍ಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಕ್ಟರ್ ಸ್ಟ್ಯಾನಿ ಕುಟಿನ್ಹೋ ಎರಡು ಲಕ್ಷ ರೂ ಚೆಕ್‍ನ್ನು ಮುಖ್ಯಶಿಕ್ಷಕ ಶಂಕರ್‍ಗೆ ಹಸ್ತಾಂತರಿಸಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಮೆಟ್ರೋ ಮಂಗಳೂರು ಅಧ್ಯಕ್ಷ ನಿತೀನ್ ಕಾಮತ್, ಗುತ್ತಿಗೆದಾರ ಮೋಹನದಾಸ ಶೆಟ್ಟಿ(ದಾಸ್ ಅಸೋಸಿಯೇಟ್ಸ್ ಮಂಗಳೂರು), ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪುಷ್ಪಾ, ಎಸ್‍ಡಿಎಂಸಿ ಅಧ್ಯಕ್ಷ ಜನಾರ್ದನ ಸುವರ್ಣ, ಮಾಜಿ ಕಾರ್ಪೊರೇಟರ್ ಮೀರಾ ಎ ಇದ್ದರು. ಶಾಲಾ ದತ್ತಿ ನಿಧಿ ಸಮಿತಿ ಅಧ್ಯಕ್ಷ ರಘು ಸಾಲ್ಯಾನ್, ಜೈಶಂಕರ್ ಮಿತ್ರ ಮಂಡಳಿ, ಮಾಜಿ ಕಾರ್ಪೊರೇಟರ್ ಹೇಮಲತಾ ಆರ್ ಸಾಲ್ಯಾನ್, ರೋಟರಿ ಕ್ಲಬ್ ಸದಸ್ಯರು, ಶಾಲಾ ಮಕ್ಕಳ ಪೋಷಕರು, ವಿದ್ಯಾ ಬೋಧಿನಿ ಸಂಸ್ಥೆಯ ಪದಾಧಿಕಾರಿಗಳು ಇದ್ದರು.
ಶಾಲಾ ದೈಹಿಕ ಶಿಕ್ಷಕ ಗೋಪಾಲ್ ಸ್ವಾಗತಿಸಿದರು. ಶಿಕ್ಷಕಿಯರಾದ ಗೀತಾ ರೈ ಮತ್ತು ನಿಮಿತಾ ಬಿ ಕಾರ್ಯಕ್ರಮ ನಿರೂಪಿಸಿದರೆ, ರಾಜು ಕೊಟ್ಟಾರಿ ವಂದಿಸಿದರು.
——–




