ಕೋಲಾರ: ಪ್ರಸ್ತುತ ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕಾನೂನು ಪರಿಣಿತರಿಗೆ ಅತ್ಯುತ್ತಮ ಅವಕಾಶಗಳಿದ್ದು ಇದನ್ನು ಕಾನೂನು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಡಾ.ಹೆಚ್.ಗೌರಿನಾಯ್ಡು ಅವರು ತಿಳಿಸಿದರು. ನಗರ ಹೊರವಲಯದ ಅರಹಳ್ಳಿಯ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾನೂನು ವಾರ್ಷಿಕೋತ್ಸವ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಕ್ರೀಡೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳ ವಿತರಣಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನಿನ ವಿಷಯ ಹಾಗೂ ವ್ಯಾಪ್ತಿ ಬಹಳ ವಿಸ್ತಾರವಾಗಿದ್ದು ಇದರ ಆಳವಾದ ಅಧ್ಯಯನ ಅಗತ್ಯವಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಶ್ರದ್ಧೆಯಿಂದ ಕಷ್ಟಪಟ್ಟು ಸಾಧನೆ ಮಾಡಿದಲ್ಲಿ ಮುಂದಿನ ವಕೀಲ ವೃತ್ತಿಯಲ್ಲಿ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಾನೂನು ಶಿಕ್ಷಣದಲ್ಲಿ ಗಟ್ಟಿ ಅಡಿಪಾಯ ನಿಮ್ಮದಾಗಿರಲಿ ಎಂದು ಆಶಿಸಿದರು. ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಇದನ್ನು ಶ್ರಮವಹಿಸಿ ಪಡೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಎದುರಾಗುವ ಎಲ್ಲಾ ರೀತಿಯ ಸವಾಲುಗಳನ್ನು ಸ್ವೀಕರಿಸುವ ಮೂಲಕ ಸಾಧನೆಯ ಹಾದಿಯನ್ನು ಹಿಡಿಯಬೇಕು. ಇದರ ನಡುವೆ ವಿಫಲತೆಗಳು ಎದುರಾಗುತ್ತವೆ ಎಂಬ ಅಂಜಿಕೆ ಬೇಡ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಅಂಕ ಮತ್ತು ಅಂಕಪಟ್ಟಿ ಪ್ರತಿಭೆಗೆ ಮಾನದಂಡವಲ್ಲ. ಮನುಷ್ಯ ಸಮಾಜದಲ್ಲಿ ನಾವು ಹೇಗೆ ಬದುಕನ್ನು ಕಟ್ಟಿಕೊಳ್ಳುತ್ತೇವೆ ಎಂಬುವುದು ಮುಖ್ಯ ಎಂದು ಒತ್ತಿ ಹೇಳಿದ ಅವರು, ಇನ್ನೊಬ್ಬರ ದೃಷ್ಟಿಯಲ್ಲಿ ನಾವು ಹೇಗೆ ರೂಪಿತವಾಗಿದ್ದೆ ಎಂದು ಮನಗಂಡು ಎಚ್ಚರಿಕೆಯಿಂದ ಹೆಜ್ಜೆ ಹಾಕಿ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಿಳಾ ಸಂರಕ್ಷಣಾ ಕೇಂದ್ರ ಹಾಗೂ ಶಾಂತಿಧಾಮದ ಅಧ್ಯಕ್ಷೆ ಮಂಗಳ ವಿ.ಗೌಡ ಅವರು ಮಾತನಾಡಿ, ಇಲ್ಲಿನ ಕಾನೂನು ವಿದ್ಯಾರ್ಥಿಗಳು ಮುಂದಿನ ವೃತ್ತಿಪರ ವಕೀಲರಾಗಿ ರೂಪಗೊಳ್ಳುವ ನೀವು, ನಿಮ್ಮ ವೃತ್ತಿಯಲ್ಲಿ ಬದ್ಧತೆಯನ್ನು ಕಾಪಾಡಿಕೊಂಡು ಮಾನವೀಯತೆಯನ್ನು ಮೈಗೂಡಿಸಿಕೊಂಡು ಹೋಗಬೇಕೆಂದು ಹೇಳಿದರು.
ಇಂದಿನ ಸಮಾಜದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಇಂತಹ ಅಮಾನವೀಯ ಘಟನೆಗಳು ಮುಂದೆ ಸಂಭವಿಸದಂತೆ, ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡುವ ಮೂಲಕ ಸಮಾಜಕ್ಕೆ ಬೆಳಕಾಗಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಎಂ. ಅನಿತಾ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕಂಡ ಕನಸ್ಸನ್ನು ನನಸ್ಸು ಮಾಡಿಕೊಳ್ಳಲು ಶ್ರಮವಹಿಸಬೇಕು. ಇದನ್ನು ಸಫಲವಾಗಿಸಿಕೊಳ್ಳಲು ನಿರಂತರ ಪ್ರಯತ್ನ ನಿಮ್ಮದಾಗಲಿ ಎಂದು ಆಶಿಸಿದರು.

ಡಾ.ನಾಗಶೇಷಮ್ಮ ಅವರು ಮಾತನಾಡಿ, ಕಾನೂನು ವಿದ್ಯಾಭ್ಯಾಸಕ್ಕೂ ಹಾಗೂ ನಿಜಜೀವನದಲ್ಲಿ ವಕೀಲ ವೃತ್ತಿಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಹಾಗಾಗಿ ವೃತ್ತಿಯಲ್ಲಿ ಮಾನವೀಯತೆ ಮುಖ್ಯವೇ ಹೊರತು ಹಣ-ಹೆಸರು ಪ್ರಮುಖವಲ್ಲ ಎಂದು ತಿಳಿಸಿದರು. ಡಾ.ಪ್ರಸನ್ನ ಕುಮಾರಿ ಅವರು ಮಾತನಾಡಿ, ಗುರು ಮತ್ತು ಶಿಷ್ಯರ ನಡುವೆ ಉತ್ತಮ ಭಾಂದವ್ಯವಿದ್ದಾಗ ಕಲಿಕೆ ಮತ್ತು ಸಾಧನೆ ಸುಗಮವಾಗುತ್ತದೆ. ವೃತ್ತಿಯಲ್ಲಿ ನೈಪುಣ್ಯತೆ ಇದ್ದಾಗ ಜನಮೆಚ್ಚುಗೆಗೆ ಅವಕಾಶವಾಗುತ್ತದೆ. ಹಾಗೆಯೇ ವೃತ್ತಿ ಬದುಕಿನಲ್ಲಿ ಪಾವಿತ್ರತೆ ಕಾಪಾಡಿಕೊಂಡು ಹೋಗಬೇಕೆಂದರು.
ಕಾರ್ಯಕ್ರಮದಲ್ಲಿ ಡಾ.ಧನಲಕ್ಷ್ಮೀ, ಡಾ.ಕಾವ್ಯಶ್ರೀ, ಡಾ.ಮಂಜುನಾಯಕ್, ದೈಹಿಕ ಶಿಕ್ಷಣ ನಿರ್ದೇಶಕ ಸುಬ್ರಮಣಿ, ರಾಮಕೃಷ್ಣ ಸೇರಿದಂತೆ ಮುಂತಾದವರು ಭಾಗವಹಿಸಿದರು. ವಿದ್ಯಾರ್ಥಿಗಳಾದ ನವ್ಯಶ್ರೀ ಹಾಗೂ ಪ್ರೇಮ್ ಕಾರ್ಯಕ್ರಮ ನಿರ್ವಹಿಸಿದರು.
