ಬೋಧಿವರ್ಧನ ಪ್ರಶಸ್ತಿಗೆ ಪ್ರೊ.ಆನಂದ್ ತೇಲ್ತುಂಬ್ಡೆ , ಕೋಟಿಗಾನಹಳ್ಳಿ ರಾಮಯ್ಯ, ಸೇರಿದಂತೆ ಐದು ಮಂದಿಯನ್ನು ಆಯ್ಕೆ
ಬಾಗಲಕೋಟೆ :ಸ್ಫೂರ್ತಿಧಾಮ ವತಿಯಿಂದ ಎ.14ರ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಕೊಡಮಾಡುತ್ತಿರುವ 2019ರ ಬೋಧಿವೃಕ್ಷ ಪ್ರಶಸ್ತಿಗೆ ಚಿಂತಕ ಹಾಗೂ ಬೋಧಿವರ್ಧನ ಪ್ರಶಸ್ತಿಗೆ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಸೇರಿದಂತೆ ಐದು ಮಂದಿಯನ್ನು ಆಯ್ಕೆ ಮಾಡಲಾಗಿದೆ. ಎ.14ರ ಅಂಬೇಡ್ಕರ್ ಹಬ್ಬದ ಪ್ರಯುಕ್ತ ತಳಸ್ತರದವರ ಅಭಿವೃದ್ಧಿ ಮತ್ತು ಏಳ್ಗೆಗಾಗಿ ದುಡಿದವರನ್ನು ಗುರುತಿಸುವ, ಗೌರವಿಸುವ ಮತ್ತು ಬೆಂಬಲಿಸುವ ಸಲುವಾಗಿ ಬೋಧಿವೃಕ್ಷ ಮತ್ತು ಬೋಧಿವರ್ಧನ ಪ್ರಶಸ್ತಿಯನ್ನು ಪ್ರತಿವರ್ಷ ನೀಡುತ್ತಾ ಬರಲಾಗುತ್ತಿದೆ. ಬೋಧಿವೃಕ್ಷ ಪ್ರಶಸ್ತಿಯು ಒಂದು ಲಕ್ಷ ರೂ.ನಗದು, ಪ್ರಶಸ್ತಿ ಫಲಕ ಹಾಗೂ ಬೋಧಿವರ್ಧನ ಪ್ರಶಸ್ತಿ ಐದು ಮಂದಿ ಕೊಡಲಾಗುತ್ತಿದ್ದು, ತಲಾ ಇಪ್ಪತ್ತು ಸಾವಿರ ರೂ.ನಗದು, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.
ಪ್ರೊ.ಆನಂದ್ ತೇಲ್ತುಂಬ್ಡೆ: ಬೋಧಿವೃಕ್ಷ ಪ್ರಶಸ್ತಿಗೆ ಆಯ್ಕೆಯಾಗಿರುವ ಅಂಬೇಡ್ಕರ್‌ವಾದಿ ಚಿಂತಕ ಪ್ರೊ.ಆನಂದ್ ತೇಲ್ತುಂಬ್ಡೆ, ಅಂಬೇಡ್ಕರ್ ಅವರ ಬದುಕು ಬರಹಗಳಿಗೆ ವಿಭಿನ್ನ ವ್ಯಾಖ್ಯಾನಗಳನ್ನು ನೀಡಿದ ಚಿಂತಕರು. ಯಾವುದೇ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆ ನಡೆದರೆ ಸ್ಥಳಕ್ಕೆ ಧಾವಿಸಿ ವಸ್ತುನಿಷ್ಠವಾದ ವರದಿ, ಲೇಖನಗಳನ್ನು ಬರೆಯುವ ಮೂಲಕ ಜನಸಮುದಾಯಕ್ಕೆ ಸತ್ಯಾಂಶವನ್ನು ತಿಳಿಯಪಡಿಸುತ್ತಿದ್ದಾರೆ. ಸದ್ಯ, ಗೋವಾದ ಐಐಎಂನ ಸೀನಿಯರ್ ಪ್ರೊಫೆಸರ್ ಆಗಿದ್ದಾರೆ.
ಕೋಟಿಗಾನಹಳ್ಳಿ ರಾಮಯ್ಯ: ಬೋಧಿವರ್ಧನ ಪ್ರಶಸ್ತಿಗೆ ಪುರಸ್ಕೃತರಾಗಿರುವ ದಲಿತ ಚಳವಳಿಯ ಮುಂಚೂಣಿ ನಾಯಕ ಕೋಟಿಗಾನಹಳ್ಳಿ ರಾಮಯ್ಯರವರ ಬದುಕು-ಬರಹ ಸೃಜನಾತ್ಮಕತೆಯಿಂದ ಕೂಡಿದೆ. ಇವರ ಹೋರಾಟದ ಹಾಡುಗಳು ದಲಿತ ಪ್ರತಿರೋಧದ ತಾತ್ವಿಕತೆಯನ್ನು ಗಟ್ಟಿಗೊಳಿಸಿವೆ. ಸಾಂಸ್ಕೃತಿಕ ಕ್ರಾಂತಿಯ ಅಂಬೇಡ್ಕರ್ ಕನಸನ್ನು ನಿಜ ಬದುಕಿನ ತಲಪರಿಗೆಗಳ ಮೂಲಕ ಸಾಕಾರವಾಗಿಸಲು ಇವರು ಕಟ್ಟಿದ ಆದಿಮ ಸಾಂಸ್ಕೃತಿಕ ಕೇಂದ್ರ ಸಹಚಿಂತನೆ, ಸಹಭೋಜನದ ಮೂಲಕ ಸಮುದಾಯಗಳನ್ನು ಬೆಸೆಯುವಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ.
ಪ್ರೊ.ನರೇಂದ್ರ ನಾಯಕ್: ಬೋಧಿವರ್ಧನ ಪ್ರಶಸ್ತಿಗೆ ಪುರಸ್ಕೃತರಾಗಿರುವ ಪ್ರೊ.ನರೇಂದ್ರ ನಾಯಕ್ ವೈಜ್ಞಾನಿಕ, ವೈಚಾರಿಕ ಪ್ರಜ್ಞೆ ಬೆಳೆಸಲು ನಿರಂತರವಾಗಿ ಶ್ರಮಿಸುತ್ತಿರುವ ನಾಡಿನ ಬಹುಮುಖ್ಯ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಅವರ ವೈಚಾರಿಕ ಸವಾಲುಗಳನ್ನು ಯಾವ ಪವಾಡ ಪುರುಷರೂ ಎದುರಿಸಲಾಗಿಲ್ಲ. ಜೀವರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿರುವ ಅವರು, ವೈಚಾರಿಕ ನಿಲುವಿನಿಂದಾಗಿ ಸನಾತನವಾದಿಗಳಿಂದ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತ ವಿಚಾರವಾದಿಗಳಾಗಿ ಗುರುತಿಸಿಕೊಂಡಿದ್ದಾರೆ.
ಜಾನಕಮ್ಮ: ಬೋಧಿವರ್ಧನ ಪ್ರಶಸ್ತಿಗೆ ಪುರಸ್ಕೃತರಾಗಿರುವ ಪಿರಿಯಾಪಟ್ಟಣದ ಅಬ್ಬಳತಿ ಕಾಲನಿಯ ಜೇನು ಕುರುಬ ಸಮುದಾಯದ ಜಾನಕಮ್ಮ, ಕಳೆದ 25ವರ್ಷಗಳಿಂದ ಗಿರಿಜನ ಹಾಡಿಯ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಅನಕ್ಷರಸ್ಥೆಯಾದ ಈಕೆ 250ಕ್ಕೂ ಹೆಚ್ಚು ಗಿರಿಜನ ಕುಟುಂಬಗಳಿಗೆ ಪಡಿತರ ಚೀಟಿ ಕೊಡಿಸುವುದು, ಬ್ಯಾಂಕ್ ಖಾತೆ ತೆರೆಸುವುದು, ಜಾಬ್‌ಕಾರ್ಡ್ ಕೊಡಿಸುವುದು ಸೇರಿದಂತೆ ಹಲವು ಜನಪರ ಕಾರ್ಯದಲ್ಲಿ ತೊಡಗಿದ್ದಾರೆ.
ತ್ರಿವಿಕ್ರಮ ಮಹಾದೇವ: ಬೋಧಿವರ್ಧನ ಪ್ರಶಸ್ತಿಗೆ ಪುರಸ್ಕೃತರಾಗಿರುವ ಬೆಂಗಳೂರಿನ ಮಹಾದೇವ, ಸಾವಿನ ಸೂತಕದ ಆತಂಕವಿಲ್ಲದೆ ತಮ್ಮ ಇಡೀ ಬದುಕನ್ನು ಅನಾಥಶವಗಳ ಗೌರವಪೂರ್ವಕ ಅಂತ್ಯಕ್ರಿಯೆಗೆ ಮೀಸಲಿಟ್ಟವರು. ಇಲ್ಲಿಯವರೆಗೂ 10ಸಾವಿರಕ್ಕೂ ಹೆಚ್ಚು ಅನಾಥವಗಳನ್ನು ಸಂಸ್ಕಾರ ಮಾಡಿದ್ದಾರೆ.
ರುಕ್ಮಿಣಿ ಬಾಯಿ ರೋಹಿದಾಸ್ ಕಾಂಬಳೆ: ಬೋಧಿವರ್ಧನ ಪ್ರಶಸ್ತಿಗೆ ಪುರುಸ್ಕೃತರಾಗಿರುವ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಜವಳಗಾ ಗ್ರಾಮದ ಅನಕ್ಷರಸ್ಥ ರುಕ್ಮಿಣಿಬಾಯಿ ರೋಹಿದಾಸ ಕಾಂಬಳೆ, ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಪಿಡುಗಾಗಿರುವ ಮದ್ಯಪಾನದ ವಿರುದ್ಧ ಸಮರಸಾರಿದ ಧೀರ ಮಹಿಳೆ. ಗ್ರಾಮದಲ್ಲಿ ಸಾರಾಯಿ ನಿಷೇಧಿಸಲು ಹೋರಾಟ ರೂಪಿಸುವ ಮೂಲಕ ಕಳೆದ 15ವರ್ಷಗಳಿಂಲೂ ಸಾರಾಯಿ ಮಾರಾಟ ನಿಷೇಧಿಸಲಾಗಿದೆ.
ಎ.14ರಂದು ಸಂಜೆ 6ಕ್ಕೆ ನಗರದ ಸ್ಫೂರ್ತಿಧಾಮದಲ್ಲಿ ಬೋಧಿ ವೃಕ್ಷ ಹಾಗೂ ಬೋಧಿವರ್ಧನ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಸ್ಕೃತಿ ಚಿಂತಕ ಕಾಂಚಾ ಐಲಯ್ಯ ಭಾಗವಹಿಸಲಿದ್ದು, ಸ್ಫೂರ್ತಿಧಾಮದ ಅಧ್ಯಕ್ಷ ಎಸ್. ಮರಿಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
ಇದಕ್ಕೂ ಮೊದಲು ಬೆಳಗ್ಗೆ 10ರಿಂದ 11ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬೆಳಗ್ಗೆ 11ರಿಂದ 1ರವರೆಗೆ ವರ್ತಮಾನ ರಾಜಕಾರಣದ ಕುರಿತು ದೊಡ್ಡಿಪಾಳ್ಯ ನರಸಿಂಹಮೂರ್ತಿ, ಡಾ.ಸಿರಾಜ್ ಅಹ್ಮದ್, ಮಲ್ಲಿಗೆ ಸಿರಿಮನೆ ಮಾತನಾಡಲಿದ್ದಾರೆ. ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಅಧ್ಯಕ್ಷತೆ ವಹಿಸಲಿದ್ದಾರೆ.
Attachments area