ಮಂಗಳೂರು : ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆದು ಗುಣಮುಖರಾದರೂ ಕೆಲವರು ಭವಿಷ್ಯದಲ್ಲಿ ಅಂತರ್ಮುಖಿಗಳಾಗಿ, ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆತುಕೊಳ್ಳಲು ಸಂಕೋಚಪಟ್ಟುಕೊಳ್ಳುತ್ತ ಯಾರಿಗೂ ಬೇಡವಾಗುತ್ತಾರೆ. ಇಂತಹವರಲ್ಲಿ ಸಕಾರಾತ್ಮಕ ಬದಲಾವಣೆಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರುವ ಸಾಮಾಜಿಕ ಜವಾಬ್ದಾರಿಯ `ಸನ್ಮತಿ ಹಗಲು ಯೋಗಕ್ಷೇಮ ಕೇಂದ್ರ'(ರಿ) ಮಂಗಳೂರಿನ ಚಿಲಿಂಬಿಯ `ದಿಶಾ’ದಲ್ಲಿ ಉದ್ಘಾಟನೆಗೊಂಡಿತು. ವ್ಯಕ್ತಿಯೋರ್ವ ಮಾನಸಿಕ ಅಸ್ವಸ್ಥತೆಗೊಳಗಾದಾಗ ಅವನಿಗೆ ಕುಟುಂಬ, ಬಂಧುವರ್ಗ, ಸ್ನೇಹಿತರ ನೆರವು ಅತಿ ಅಗತ್ಯ. ಅದು ಚಿಕಿತ್ಸೆ, ಸಾಂತ್ವನ ಅಥವಾ ಪುನರ್ವಸತಿ ಆಗಿರಬಹುದು. ಒಟ್ಟರ್ಥದಲ್ಲಿ ಅವರು ಸಮಾಜದಲ್ಲಿ ಎಲ್ಲರಂತೆ ಅರ್ಥಪೂರ್ಣ ಜೀವನ ನಡೆಸುವಂತಾಗಬೇಕು ಎಂಬುದು `ಸನ್ಮತಿ’ಯ ಧ್ಯೇಯವಾಗಿದೆ ಎಂದು ಕೇಂದ್ರದ ಟ್ರಸ್ಟಿ ಕುಶಲಾ ಈಶ್ವರ ಪೂಜಾರಿ ತಿಳಿಸಿದರು.
ಮಾನಸಿಕ ಅಸ್ವಸ್ಥಗೊಂಡವರು ಚಿಕಿತ್ಸೆ ಬಳಿಕ ಗುಣಮುಖರಾದರೂ ತಮ್ಮನ್ನು ಯಾರಾದರೂ ಟೀಕಿಸಬಹುದೆಂಬ ಕೀಳರಿಮೆಯಿಂದ ಏಕಾಂಗಿಯಾಗಿರಲು ಬಯಸುತ್ತಾರೆ. ಕೆಲಸದಲ್ಲಿ ಆಸಕ್ತಿ ಕಳೆದುಕೊಂಡು, ಮನೆಯವರೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ. ಇವರ ಮನಸ್ಸಿನಲ್ಲಿ ಸದಾ ನಕಾರಾತ್ಮಕ ವಿಷಯ ತುಂಬಿಕೊಂಡಿರುವುದರಿಂದ ಮನೆಯವರ ಚಿಂತೆಗೆ ಕಾರಣನಾಗುತ್ತಾನೆ. ಇಂತಹ ವ್ಯಕ್ತಿಗಳಲ್ಲಿ ಸಕಾರಾತ್ಮಕ ಬದಲಾವಣೆಗಾಗಿ ಕೇಂದ್ರದಲ್ಲಿ ಆಪ್ತ ಸಮಾಲೋಚನೆ, ಕ್ರೀಡೆ, ಕೌಶಲ್ಯಾಭಿವೃದ್ಧಿಯಂತಹ ತರಬೇತಿ ನೀಡಲಾಗುತ್ತದೆ ಎಂದರು. ಮಂಗಳೂರಿನ ಖ್ಯಾತ ಮಾನಸಿಕ ತಜ್ಞ ಡಾ. ಅರುಣ್ ರಾವ್ ಕೇಂದ್ರ ಉದ್ಘಾಟಿಸಿದರು. ರೋಶನಿ ನಿಲಯದ ಡಾ. ರಮಿಳಾ ಶೇಖರ್ ಅಧ್ಯಕ್ಷತೆ ವಹಿಸಿದ್ದರು, ಇವರು ಕೇಂದ್ರದ ಮಾಗದರ್ಶಕರಾಗಿದ್ದಾರೆ. ವೇದಿಕೆಯಲ್ಲಿ ಎಸ್‍ಡಿಎಂ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ದೇವರಾಜ ಕೆ, ಉರ್ವಾ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ವನಜಾಕ್ಷಿ, ಕುಲವೂರು ನಾರಾಯಣ ಪೂಜಾರಿ, ಕುಶಲಾ ಈಶ್ವರ ಪೂಜಾರಿ, ಈಶ್ವರ ಪೂಜಾರಿ ಮೊದಲಾದವರಿದ್ದರು.
ಸಕಾರಾತ್ಮಕ ಪರಿವರ್ತನೆಗೆ ಪೂರಕ ಕೇಂದ್ರ `ಸನ್ಮತಿ’.. ಮಂಗಳೂರಿನ ಸನ್ಮತಿ ಚಾರಿಟೇಬಲ್ ಟ್ರಸ್ಟಿನ ಅಧೀನದಲ್ಲಿರುವ ಸನ್ಮತಿ ಹಗಲು ಯೋಗ ಕ್ಷೇಮ ಕೇಂದ್ರವು `ಮಾನಸಿಕ ಅಸ್ವಸ್ಥತೆಯಿಂದ ಗುಣಮುಖ ಹೊಂದಿವರು ಮತ್ತು ಹೊಂದುತ್ತಿರುವವರು’ ಎಂಬ ಧ್ಯೇಯ ವಾಕ್ಯದೊಂದಿಗೆ ವ್ಯವಹರಿಸುತ್ತಿದೆ. ಕೇಂದ್ರದಲ್ಲಿ ಮಾನಸಿಕ ಒತ್ತಡ ಕಡಿಮೆ ಮಾಡಲು ಯೋಗ, ಪ್ರಾಣಾಯಾಮ, ಮುಕ್ತ ಚರ್ಚೆ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಚಟುವಟಿಕೆ, ಮನೋರಂಜನೆ, ನೈಪುಣ್ಯತೆಗನುಸಾರವಾಗಿ ವೃತ್ತಿ ತರಬೇತಿ, ತಜ್ಞ ವೈದ್ಯರ ಸಹಿತ ಮನೋವಿಜ್ಞಾನ ಪರಿಣತರಿಂದ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಕೇಂದ್ರವು ಬೆಳಿಗ್ಗೆ 9:30ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ. ಇದು 18ರಿಂದ 60 ವರ್ಷದ ಮಹಿಳೆಯರಿಗೆ ಮಾತ್ರ ಸೀಮಿತ. ಹೆಚ್ಚಿನ ಮಾಹಿತಿಗಾಗಿ 9844157423 ಮೂಲಕ `ಸನ್ಮತಿ’ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

