ಬಂಟ್ವಾಳ: ಸರಕಾರಿ ಶಾಲೆ ಉಳಿಸಿ ಆಂದೋಲನದ ಅಂಗವಾಗಿ ಬಂಟ್ವಾಳ ತಾಲೂಕಿನ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಬಂಟ್ವಾಳದಿಂದ ಆರಂಭಗೊಂಡ ಜಾಗೃತಿ ರಥಯಾತ್ರೆಯು ರಾಜ್ಯ ರಾಜಧಾನಿ ಬೆಂಗಳೂರನ್ನು ತಲುಪಿದೆ. ಈ ಆಂದೋಲನಕ್ಕೆ ಬೆಂಗಳೂರಿನ ಗಾಂಧಿನಗರದಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಶಿಕ್ಷಣ ಹೋರಾಟಗಾರರನ್ನು ಸೇರಿಸಿಕೊಂಡು ಕಾಲ್ನಡಿಗೆ ಜಾಥದ ಮೂಲಕ ಫ್ರೀಡಂ ಪಾರ್ಕಿಗೆ ಆಗಮಿಸಿ ಬೃಹತ್ ಪ್ರತಿಭಟನೆಯು ಶನಿವಾರ ಬೆಳಿಗ್ಗೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ, ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಮೂಲಕ ಶಾಲೆಯಲ್ಲಿನ ಮಕ್ಕಳ ಕೊರತೆಯಿಂದ ಮುಚ್ಚುತ್ತಿರುವ ದಡ್ಡಲಕಾಡು ಶಾಲೆಯನ್ನು ಉಳಿಸಲು ಸಾಧ್ಯವಾಗಿರುವಾಗ ಸರಕಾರದಿಂದ ಸರಕಾರಿ ಶಾಲೆಯನ್ನು ಉಳಿಸಲು ಸಾಧ್ಯವಿಲ್ಲವೆ ಎಂದು ಪ್ರಶ್ನಿಸಿದರು. ದಡ್ಡಲಕಾಡು ಶಾಲೆ ಮಾತ್ರ ಅಲ್ಲ ರಾಜ್ಯದ ಎಲ್ಲಾ ಗ್ರಾಮಗಳಲ್ಲೂ ಮಾದರಿ ಶಾಲೆ ನಿರ್ಮಾಣಗೊಳ್ಳ ಬೇಕು. ಕನ್ನಡ ಭಾಷೆ ಉಳಿಬೇಕಾದರೆ ಸರಕಾರಿ ಶಾಲೆ ಉಳಿಯ ಬೇಕು.ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳಾದ ಅನಿಲ್ ಶೆಟ್ಟಿ, ಪುರುಷೋತ್ತಮ ಅಂಚನ್, ಮಂಜುನಾಥ್ ಬಾಳುಪೇಟೆ, ಅಶೋಕ್ ದೊಡ್ಡಬಳ್ಳಾಪುರ, ರಾಮಚಂದ್ರ ಕರೆಂಕಿ, ದೇವದಾಸ್ ಬೆಳ್ತಂಗಡಿ, ಸಂತೋಷ್ ಕಟ್ಟೆ, ವಿಠಲ ಡಿ, ನವೀನ್ ಸೇಸಗುರಿ, ಉದಯ ಕರೆಂಕಿ ಮೊದಲಾವರು ಭಾಗವಹಿಸಿದ್ದರು.

ಪ್ರತಿಭಟನೆಗೆ ಕಾಲೇಜು ವಿದ್ಯಾರ್ಥಿಗಳು, ರೈತ ಸಂಘಟನೆಯ ಪ್ರಮುಖರು, ಕನ್ನಡ ಸಂಘಟನೆಯ ಪ್ರಮುಖರು, ರಿಕ್ಷಾ, ಕಾರು ಚಾಲಕರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು . ಪ್ರತಿಭಟನಾ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಭೋಜೆಗೌಡ ಭೇಟಿ ನೀಡಿದರು. ಸರಕಾರಿ ಶಾಲೆ ಉಳಿಸುವ ಅನಿವಾರ್ಯತೆ ಯ ಬಗ್ಗೆ ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನ ಹೋರಾಟದ ಬಗ್ಗೆ ಪ್ರಕಾಶ್ ಅಂಚನ್ ಮನವರಿಕೆ ಮಾಡಿದರು. ಬಳಿಕ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.




