ಮಂಗಳೂರು: ಲ್ಲಿ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಪ್ರಸಕ್ತ ಸಾಲಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಹೆತ್ತವರು ಪಾಲ್ಗೊಂಡಿದ್ದ ಒರಿಯೆಂಟೇಶನ್ ಕಾರ್ಯಕ್ರಮವು ಟಿ.ವಿ.ರಮಣ ಪೈ ಸಭಾಂಗಣದ ಸಮಾರಂಭದಲ್ಲಿ ಆ.5 ಭಾನುವಾರ ನಡೆಯಿತು.
ನಮ್ಮ ರಾಷ್ಟ್ರದ ಆರ್ಥಿಕತೆ ಪ್ರಗತಿಯ ಹಾದಿಯಲ್ಲಿದ್ದು ತಾಂತ್ರಿಕ ರಂಗದಲ್ಲಿಯೂ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ನಾವು ಆಶಾವಾದಿಗಳಾಗಿ ಸಂಕಷ್ಟದಲ್ಲಿಯೂ ಅವಕಾಶಗಳನ್ನು ಹುಡುಕುವ ಮನೋಭಾವ ಹೊಂದಿರಬೇಕು. ಕಲಿಕೆಯತ್ತ ಗಮನ ಕೇಂದ್ರೀಕರಿಸಿ ಸಿಲೆಬಸ್ ಹೊರತಾದ ಪೂರಕ ಅಂಶಗಳಲ್ಲಿಯೂ ಪರಿಣತರಾಗಿ ಪರಿಪೂರ್ಣತೆ ಪಡೆಯಬೇಕು. ಕೆನರಾ ಶಿಕ್ಷಣ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಜತೆಗೆ ಬದುಕಿನಲ್ಲಿಯೂ ಉತೀರ್ಣರಾಗಲು ಆದ್ಯತೆ ನೀಡಲಾಗುತ್ತಿದೆ ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಕಾರ್ಯದರ್ಶಿ ಎಂ. ರಂಗನಾಥ ಭಟ್ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ. ಅಣ್ಣಪ್ಪ ಪೈ ಮಾತನಾಡಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಹೆತ್ತವರ ತ್ಯಾಗಕ್ಕೆ ವೃತ್ತಿಪರತೆ ಮೈಗೂಡಿಸಿಕೊಂಡು ಬದ್ಧತೆ, ದಕ್ಷತೆಯೊಂದಿಗೆ ಸಾಧಕರಾಗಿ ನ್ಯಾಯ ಒದಗಿಸಬೇಕಾಗಿದೆ ಎಂದರು.
ಕಾಲೇಜಿನ ಸಂಚಾಲಕ ಎಂ. ಪದ್ಮನಾಭ ಪೈ ಕಾಲೇಜಿನ ಬೋಧಕ,ಬೋಧಕೇತರರ ಪರಿಚಯ ನೀಡಿ ವಿದ್ಯಾರ್ಥಿಗಳು ಸಂವಹನ, ಕೌಶಲಗಳನ್ನು ತಮ್ಮದಾಗಿಸಿಕೊಂಡು ಉದ್ಯೋಗಾವಕಾಶಗಳನ್ನು ಬಾಚಿಕೊಳ್ಳುವ ಅರ್ಹತೆ ಸಂಪಾದಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕಾಲೇಜು ಪ್ರಾಂಶುಪಾಲ ಡಾ. ಗಣೇಶ್ ವಿ.ಭಟ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ಪ್ರಿಯಾ ವಿ.ಫ್ರ್ಯಾಂಕ್, ಮೆಕ್ಯಾನಿಕಲ್ ವಿಭಾಗದ ಡಾ. ಎನ್.ವೆಂಕಟೇಶ್ ಪೂರಕ ಮಾಹಿತಿ ನೀಡಿದರು. ಸಹ ಪ್ರಾಧ್ಯಾಪಕಿ ಅಕ್ಷತಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಕೆಮಿಸ್ಟ್ರಿ ವಿಭಾಗ ಮುಖ್ಯಸ್ಥ ಡಾ.ಎನ್.ದಾಮೋದರ ವಂದಿಸಿದರು.

