ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಫೋಟೋಶೂಟ್‍ಗೆ ನಿಷೇಧವಿದೆ. ಆದರೆ ಸಿಬ್ಬಂದಿಗಳಿಗೆ ತಿಳಿದೋ ತಿಳಿಯದೆಯೋ ಫೋಟೋಶೂಟ್ ನಡೆಯುತ್ತಲೇ ಇದೆ. ಮೈಸೂರು ಅರಮನೆ ಒಳಗೆ ಹಾಗೂ ಹೊರಾಂಗಣ ದ್ವಾರದಲ್ಲಿಯೂ ಕೂಡ ಫೋಟೋಶೂಟ್‍ಗೆ ಅವಕಾಶ ಇಲ್ಲ. ದರ್ಬಾರ್‍ನ ಭದ್ರತೆಗಾಗಿ ಹೈ ಸೆಕ್ಯೂರಿಟಿ ಝೋನ್ ಎಂದು ಪರಿಗಣಿಸಿ ಫೋಟೋ ತೆಗೆಯುವಂತಿಲ್ಲ. ಫೋಟೋ ಶೂಟ್‍ಗಿಂತ ಸಾಮಾನ್ಯ ಮೊಬೈಲ್ ಕ್ಲಿಕ್‍ಗೆ ಕೂಡ ಅವಕಾವಿಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ.

ಈ ಹಿಂದೆ ಜೋಡಿಯೊಂದು ಮದುವೆ ಮುಂಚಿತವಾಗಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿ ವಿವಾದಕ್ಕೆ ಸಿಲುಕಿದ ವಿಷಯ ಎಲ್ಲರಿಗೂ ನೆನಪಿರುವುದೆ. ಆ ವಿವಾದ ಇನ್ನೇನು ತಣ್ಣಗಾಗಿದೆ ಎನ್ನುವಷ್ಟರಲ್ಲಿ ಹೊಸ ಫೋಟೋಶೂಟ್ ಒಂದು ಎಲ್ಲರ ಚರ್ಚೆಗೆ ವಿಷಯವಾಗಿದೆ.

ಕೊಡಗಿನ ಕುವರಿ ಕನ್ನಡದ ಖ್ಯಾತ ನಟಿ ನಿಧಿ ಸುಬ್ಬಯ್ಯ ಇತ್ತೀಚೆಗೆ ತಮ್ಮ ಇನ್ಸ್ಟಾಖಾತೆಯಲ್ಲಿ ಮಾಡಿದ ಪೋಸ್ಟ್ ಈ ಹಿಂದೆ ನಡೆದ ವಿವಾದವನ್ನು ನೆನಪಿಸುವಂತೆ ಮಾಡಿದೆ. ಕಾರಣ ನಿಧಿ ಸುಬ್ಬಯ್ಯ ದರ್ಬಾರ್ ಹಾಲ್‍ನಲ್ಲಿ ಫೋಟೋಶೂಟ್ ನಡೆಸಿರುವುದು. ಅವರು ಮಾಡಿರುವ ಪೋಸ್ಟ್ ಈಗ ವೈರಲ್ ಆಗಿದೆ. ಮೈಸೂರು ಅರಮನೆಯಲ್ಲಿ ಫೋಟೋಶೂಟ್ ನಿಷೇಧವಿದ್ದರೂ ನಿಧಿ ಸುಬ್ಬಯ್ಯ ಹೇಗೆ ಫೋಟೋ ಶೂಟ್ ಮಾಡಿದ್ದಾರೆ ಎಂದು ಚರ್ಚೆ ಶುರುವಾಗಿದೆ.
ಅಲ್ಲಿನ ಸಿಬ್ಬಂದಿ ವರ್ಗ ಅವಕಾಶ ನೀಡದೇ ಫೋಟೋಶೂಟ್ ಸಾಧ್ಯವಿಲ್ಲ. ಪ್ರವಾಸಿಗರಿಲ್ಲದ ಸಮಯದಲ್ಲಿ ಫೋಟೋಶೂಟ್ ನಡೆಸಲಾಗಿದೆ. ಅಷ್ಟಕ್ಕೂ ಮೈಸೂರು ಅರಮನೆಯಲ್ಲಿ ಫೋಟೋ ಶೂಟ್ ಮಾಡಲು ಸಾಧ್ಯವಾಗಿದ್ದು ಹೇಗೆ? ಎಂಬುದು ಪ್ರಶ್ನೆಯಾಗಿದೆ.
