ಬೆಂಗಳೂರು: ಗೌರಿ ಹತ್ಯೆ ಪ್ರಕರಣಕ್ಕೂ ಶ್ರೀರಾಮ ಸೇನೆಗೂ ಸಂಬಂಧವಿದೆ ಎಂದು ಮಾಧ್ಯಮಗಳು ಊಹಾಪೋಹ ವರದಿ ಮಾಡುತ್ತಿವೆ. ಆದರೆ, ಹತ್ಯೆಗೂ ನಮ್ಮ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ.
ರವಿವಾರ ರಾಜಾಜಿನಗರದ ರಾಮಮಂದಿರ ದೇವಸ್ಥಾನದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಎಡಪಂಥೀಯರ ಹಿಂದೂ ವಿರೋಧಿ ಷಡ್ಯಂತ್ರ ಬಹಿರಂಗಗೊಳಿಸಲು ಜನಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಕಾಶ್ ರೈ ಸೇರಿದಂತೆ, ಎಲ್ಲ ಪ್ರಗತಿಪರರೂ ಕಾಂಗ್ರೆಸ್ ಏಜೆಂಟ್‌ಗಳು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪ್ರಗತಿಪರರ ವಿದೇಶ ಯಾತ್ರೆಗೆ ಹಣ ಹೊಡೆಯುತ್ತಿದ್ದರು. ಮೋದಿ ಅಧಿಕಾರಕ್ಕೆ ಬಂದ ಮೇಲೆ ಅದಕ್ಕೆ ಕಡಿವಾಣ ಹಾಕಿದ್ದರು. ಹೀಗಾಗಿ ಅವರೆಲ್ಲ ಸೇರಿ ಮೋದಿ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದು ಹೇಳಿದರು.
ಎಸ್‌ಐಟಿ ಅಧಿಕಾರಿಗಳು ಅಭಿ ಮತ್ತು ಗಿರಿ ಎಂಬುವವರನ್ನ ಬಂಧಿಸಿ, ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ. ಪೊಲೀಸರ ಮೇಲೆ ನನಗೆ ನಂಬಿಕೆಯಿದೆ. ಆದರೆ, ಕಾಂಗ್ರೆಸ್‌ನವರು ಪೊಲೀಸರನ್ನ ದಾರಿ ತಪ್ಪಿಸುತ್ತಿದ್ದಾರೆ. ನವೀನ್‌ನನ್ನು ಬಂಧಿಸಿದಾಗ ಅವನ ಬಳಿ ಗುಂಡುಗಳಿವೆ ಎಂದು ಪೊಲೀಸರು ಹೇಳಿದ್ದರು. ನವೀನ್‌ಗೆ ಗುಂಡು ನೀಡಿದವನ ವಿಚಾರಣೆ ಮಾಡಿದಾಗ ಮೂರು ಬಾರಿ ಗುಂಡು ನೀಡಿದ್ದಾಗಿ ಹೇಳಿಕೆ ನೀಡಿದ್ದ. ಹೀಗಿದ್ದರೂ ಸಹ ಪೊಲೀಸರು ಗುಂಡು ಕೊಟ್ಟವನನ್ನು ಬಂದಿಸಿಲ್ಲವೇಕೆ ಎಂದು ಪ್ರಶ್ನಿಸಿದರು.

