ಬೆಂಗಳೂರು: ಪತ್ರಕರ್ತೆ ಗೌರಿಲಂಕೇಶ್ ಹತ್ಯೆಯಲ್ಲಿ ಶ್ರೀರಾಮಸೇನೆಯ ಯಾವುದೇ ಕೈವಾಡವಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಹತ್ಯೆಯನ್ನು ಖಂಡಿಸುತ್ತೇವೆ. ಹಿಂದೂ ಧರ್ಮದ ವಿರೋಧಿಯಾಗಿದ್ದ ಗೌರಿ ಅವರನ್ನು ಹತ್ಯೆ ಮಾಡುವಷ್ಟು ಕೀಳುಮಟ್ಟಕ್ಕೆ ಹಿಂದೂ ಪರ ಸಂಘಟನೆಗಳು ಇಳಿಯುವುದಿಲ್ಲ. ಆದರೆ ಈ ವಿಚಾರದಲ್ಲಿ ಸುಮ್ಮನೆ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಎಳೆದು ತರುತ್ತಿದ್ದಾರೆ ಎಂದು ಹೇಳಿದ್ದಾರೆ.
ಗೌರಿ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನವೀನ್, ಪುರುಷೋತ್ತಮ್ ಸೇರಿದಂತೆ ಯಾರೂ ಸಹ ಶ್ರೀರಾಮ ಸೇನೆಯ ಕಾರ್ಯಕರ್ತರಲ್ಲ. ಬಂಧನವಾಗಿರುವ ನವೀನ್ ಮದ್ದೂರಿನವರಾಗಿದ್ದು, ಮದ್ದೂರಿನಲ್ಲಿ ಶ್ರೀರಾಮಸೇನೆಯ ಸಂಘಟನೆಯೇ ಇಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ.
ಮುಸ್ಲಿಂ, ಕ್ರಿಶ್ಚಿಯನ್,ಮಾವೊವಾದಿ, ನಕ್ಸಲೀಯರಂತಹ ಉಗ್ರ ಸಂಘಟನೆಗಳಲ್ಲಿ ಪೈಶಾಚಿಕ ಹತ್ಯೆಗಳನ್ನು ಮಾಡಲು ತರಬೇತಿ ನೀಡಲಾಗುತ್ತದೆ ಎಂದು ಆರೋಪಿಸಿದ್ದಾರೆ.

