5d5cf885e49ecb417ef4b11dcc0bb6c0

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಮೂರನೆ ವರ್ಷದ ‘ಪಟ್ಲ ಸಂಭ್ರಮ-2018’ ನಗರದ ಅಡ್ಯಾರ್‌ನಲ್ಲಿರುವ ಅಡ್ಯಾರ್ ಗಾರ್ಡನ್‌ನಲ್ಲಿ ರವಿವಾರ ಅದ್ದೂರಿಯಾಗಿ ಜರಗಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮುಂಬೈಯ ಉದ್ಯಮಿ ಎನ್.ಟಿ.ಪೂಜಾರಿ, ಕೇವಲ ಹತ್ತು ಅಡಿ ಅಗಲ ಹತ್ತು ಅಡಿ ಉದ್ದದ ಯಕ್ಷರಂಗದ ವೇದಿಕೆಯಲ್ಲಿ ಸಮಸ್ತ ಕಥಾ ಭಾಗವನ್ನು ಜನರ ಮನಮುಟ್ಟುವಂತೆ ಅಭಿನಯಿಸಿ ಪ್ರೇಕ್ಷಕರ ಮುಂದಿಡುವ ಯಕ್ಷಗಾನ ಪುರುಷರಿಗೆ ಮಾತ್ರ ಸೀಮಿತವಾಗಿರುವ ಕಲೆಯಾಗಿ ಉಳಿದಿಲ್ಲ. ಈ ಸಂದರ್ಭದಲ್ಲಿ ಕಲಾವಿದರ ಬದುಕಿಗೆ ನೆರವಾಗುವ ಉದ್ದೇಶದಿಂದ ಕಾರ್ಯಾಚರಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಕಾರ್ಯವೈಖರಿ ಶ್ಲಾಘನೀಯ ಎಂದರು.

ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಎಂ.ಎ ಹೆಗಡೆ ಮಾತನಾಡಿ, ಅಕಾಡಮಿಂದ ಮಾಡಲು ಸಾಧ್ಯವಾಗದೆ ಇರುವ ಕಾರ್ಯಕ್ರಮವನ್ನು ಪಟ್ಲ ಫೌಂಡೇಶನ್ ಸಾರ್ವಜನಿಕರ ಬೆಂಬಲದಿಂದ ಮಾಡುತ್ತಿರುವುದು ಮಾದರಿಯಾಗಿದೆ. ಇದು ನಮ್ಮ ಸರಕಾರವನ್ನು ಕಣ್ಣು ತೆರೆಸಬೇಕಾಗಿದೆ ಎಂದರು.

ಟೀಲು ಕ್ಷೇತ್ರದ ಅನುವಂಶೀಯ ಅರ್ಚಕರಾದ ವೆಂಕಟರಮಣ ಅಸ್ರಣ್ಣ, ಕಮಲಾ ದೇವಿಪ್ರಸಾದ್ ಅಸ್ರಣ್ಣ, ಶ್ರೀ ಹರಿನಾರಾಯಣ ದಾಸ ಅಸ್ರಣ್ಣ, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸತೀಶ್ ಭಂಡಾರಿ, ಜಾಗತಿಕ ಭಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮೊದಲಾದವರು ಮಾತನಾಡಿ ಶುಭ ಹಾರೈಸಿದರು.

ಒಡಿಯೂರು ಶ್ರೀಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆರ್ಶೀವಚನ ನೀಡಿದರು. ಅಲ್ ಕಾರ್ಗೋ ಸಮೂಹ ಸಂಸ್ಥೆಯ ಅಧ್ಯಕ್ಷ ಶಶಿಕಿರಣ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಶ್ರೀ ಕ್ಷೇತ್ರದ ಅನುವಂಶೀಯ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಮಾತನಾಡಿ ಶುಭ ಹಾರೈಸಿದರು.

“ಪಟ್ಲ ಪ್ರಶಸ್ತಿ” ಪ್ರದಾನ: ಯಕ್ಷಗಾನ ರಂಗಕ್ಕೆ ಮಹತ್ವದ ಕೊಡುಗೆ ನೀಡಿದ ಡಾ.ಶಿಮಂತೂರು ನಾರಾಯಣ ಶೆಟ್ಟಿಯವರಿಗೆ
ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಳಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಶಿಮಂತೂರು ನಾರಾಯಣ ಶೆಟ್ಟಿ, ಪಟ್ಲ ಸತೀಶ್ ತನ್ನ ಪ್ರೀತಿಯ ಶಿಷ್ಯ. ಆತ ಮಾಡುತ್ತಿರುವ ಕೆಲಸ ಮಹತ್ವದ್ದು. ಶಿಷ್ಯನ ಕೆಲಸಕ್ಕೆ ನಾನು ಸದಾ ಬೆಂಬಲ ನೀಡುತ್ತೇನೆ ಎಂದವರು, ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂ. ನಗದಿಗೆ 1,008 ರೂ. ಸೇರಿಸಿ ಫೌಂಡೇಶನ್‌ಗೆ ಕೊಡುಗೆಯಾಗಿ ಹಿಂದಿರುಗಿಸಿದರು.

‘ಯಕ್ಷ ಧ್ರುವ’ ಕಲಾ ಗೌರವ: ವೃತ್ತಿ ಕಲಾವಿದರಾದ ಕುರಿಯ ಗಣಪತಿ ಶಾಸ್ತ್ರಿ, ಎಂ.ಕೆ.ರಮೇಶ್ ಆಚಾರ್ಯ, ಕುತ್ತೊಟ್ಟು ವಾಸು ಶೆಟ್ಟಿ, ಆರ್ಗೋಡು ಮೋಹನ್ ದಾಸ್ ಶೆಣೈ, ಆನಂದ ಶೆಟ್ಟಿ ಐರಬೈಲು, ಪಾರೆಕೋಡಿ ಗಣಪತಿ ಭಟ್ ಹಾಗೂ ಮಹಿಳಾ ಕಲಾವಿದೆಯರಾದ ಶೀಲಾ ಕೆ. ಶೆಟ್ಟಿ, ಮಹಾಲಕ್ಷ್ಮೀ ಡಿ. ರಾವ್‌ರಿಗೆ ‘ಯಕ್ಷ ಧ್ರುವ’ ಕಲಾ ಗೌರವ ನೀಡಿ ಗೌರವಿಸಲಾಯಿತು. ಅಲ್ಲದೆ,  12 ಸತ್ಪಾತ್ರ ಕಲಾವಿದರಿಗೆ ಗೌರವಧನ ವಿತರಿಸಲಾಯಿತು.

ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ: ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರವನ್ನು ಉದ್ಘಾಟಿಸಿದ ಎ.ಜೆ.ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಜಯ ಶಂಕರ ಮಾರ್ಲ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆ ವಹಿಸಿದ್ದರು. ಅನುವಂಶೀಯ ಮೊಕ್ತೇಸರ ಕಡೆತ್ತೂರು ಗುತ್ತು ಸನತ್ ಕುಮಾರ್ ಶೆಟ್ಟಿ, ಯಕ್ಷಗಾನ ಕಲಾವಿದ ಡಾ.ಪ್ರಭಾಕರ ಜೋಶಿ, ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸದಾನಂದ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಉದ್ಯಮಿ ಅಶೋಕ್, ಸೌಂದರ್ಯ ರಮೇಶ್, ದಿವಾಕರ ನಾಯ್ಕಿ ಅಡ್ಯಾರ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ರಾಜ್ಯ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಕ್, ಮಾಜಿ ಶಾಸಕ ಮೊಯ್ದಿನ್ ಬಾವ, ಉದ್ಯಮಿ ಶಶಿಧರ ಶೆಟ್ಟಿ, ಕೆ.ಎಂ. ಶೆಟ್ಟಿ, ಅಜಿತ್ ಶೆಟ್ಟಿ ಗುಜರಾತ್, ಸಂತೋಷ್ ಶೆಟ್ಟಿ ಪೂನಾ, ಸರ್ವೋತ್ತಮ ಶೆಟ್ಟಿ ದುಬೈ, ರೋಹಿತ್ ಶೆಟ್ಟಿ ಪೂನಾ, ಶಂಕರ ಶೆಟ್ಟಿ ಗುಜರಾತ್, ರಘು ಎಲ್. ಶೆಟ್ಟಿ ಬಡಗ ಬೆಳ್ಳೂರು, ಎಸ್.ಕೆ.ಪೂಜಾರಿ ಮಸ್ಕತ್, ವಸಂತ ಶೆಟ್ಟಿ ಬೆಳ್ಳಾರೆ, ದಿನೇಶ್ ವೈದ್ಯ, ಪ್ರವೀಣ್ ಶೆಟ್ಟಿ ಪೂನಾ, ಜಗನ್ನಾಥ ಶೆಟ್ಟಿ ಬಾಳ, ಕಲ್ಲಡ್ಕ ಪ್ರಭಾಕರ ಭಟ್, ಆದಾಯ ತೆರಿಗೆ ಉಪ ಆಯುಕ್ತ ಎಂ.ನಾಗಭೂಷಣ, ಪಟ್ಲ ಫೌಂಡೇಶನ್ನಿನ ವಿವಿಧ ಘಟಕದ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಟ್ರಸ್ಟ್‌ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿದರು. ಪದಾಧಿಕಾರಿಗಳಾದ ಕದ್ರಿ ನವನೀತ ಶೆಟ್ಟಿ, ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ನೂತನ ವೆಬ್ ಸೈಟ್ ಗೆ ಚಾಲನೆ: ಸಮಾರಂಭದಲ್ಲಿ ಯಕ್ಷಧ್ರುವ ಡಾಟ್.ಕಾಂ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು ಹಾಗೂ ‘ಪಟ್ಲಯಾನ’ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ತಾರಾ ಮೆರುಗು: ಚಲನಚಿತ್ರ ನಟರಾದ ದರ್ಶನ್, ರಿಷಬ್ ಶೆಟ್ಟಿ ಆಗಮಿಸಿ ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಿದರು.

6be8da7cd6820c9b8423db6699dee7ff

By suddi9

Leave a Reply

Your email address will not be published. Required fields are marked *