ಮಂಗಳೂರು: ನಗರದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಿತರಿಸುವಾಗ ವಂಚಿಸಲಾಗುತ್ತಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ಭರವಸೆ ನೀಡಿದ್ದಾರೆ.
ಪೊಲೀಸ್ ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಕರೆಮಾಡಿದ ನಾಗರಿಕರೊಬ್ಬರು ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಅಳತೆಯಲ್ಲಿ ವಂಚಿಸಲಾಗುತ್ತಿದೆ ಎಂದು ದೂರಿದರು. ಈ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ರಹಸ್ಯವಾಗಿ ತನಿಖೆ ನಡೆಸುವ ಭರವಸೆ ನೀಡಿದರು.
ನಗರದ ಹಲವು ಪ್ರದೇಶಗಳಲ್ಲಿ ಖಾಸಗಿ ಮಳಿಗೆಯವರು ಮತ್ತು ಕಟ್ಟಡಗಳ ಮಾಲೀಕರು ‘ನೋ ಪಾರ್ಕಿಂಗ್’ ಫಲಕ ಅಳವಡಿಸಿರುವ ಕುರಿತು ವ್ಯಕ್ತಿಯೊಬ್ಬರು ದೂರಿದರು. ಈ ಕುರಿತು ಎಲ್ಲ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ, ಅಂತಹ ಫಲಕಗಳಿದ್ದರೆ ತೆರವು ಮಾಡುವಂತೆ ಸಂಚಾರ ವಿಭಾಗದ ಎಸಿಪಿ ಕೆ.ಮಂಜುನಾಥ ಶೆಟ್ಟಿ ಅವರಿಗೆ ನಿರ್ದೇಶನ ನೀಡಿದರು.
ನಗರದಲ್ಲಿ ವಾಹನಗಳಲ್ಲಿ ಮಿತಿಗಿಂತ ಹೆಚ್ಚು ಪ್ರಕಾಶಮಾನವಾದ ದೀಪಗಳನ್ನು ಬಳಕೆ ಮಾಡುತ್ತಿದ್ದು, ಇದರಿಂದ ಹಿರಿಯ ನಾಗರಿಕರಿಗೆ, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ಬಿಜೈನ ಹಿರಿಯ ನಾಗರಿಕರೊಬ್ಬರು ದೂರು ಹೇಳಿದರು. ನಗರದ ವ್ಯಾಪ್ತಿಯಲ್ಲಿ ಪ್ರಕಾಶಮಾನವಾದ ದೀಪಗಳನ್ನು ಬಳಸಿವ ವಾಹನಗಳ ಚಾಲಕರ ವಿರುದ್ಧ ಕ್ರಮ ಜರುಗಿಸುವಂತೆ ಕಮಿಷನರ್ ಸಂಚಾರ ವಿಭಾಗದ ಪೊಲೀಸರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ ಹಾಜರಿದ್ದರು.



