ಬಳ್ಳಾರಿ: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಪ್ರತಿಷ್ಠಿತ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಸಾಧಿಸಿದ್ದು, ಬಿಜೆಪಿ ನೆಲಕಚ್ಚಿದೆ.
ಶ್ರೀರಾಮುಲು ಅವರ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಬಳ್ಳಾರಿ ಗ್ರಾಮಾಂತರ ವಿಧಾನಸಭೆಗೆ ಕಾಂಗ್ರೆಸ್ ಪಕ್ಷ ಲಗ್ಗೆ ಇಟ್ಟಿದ್ದು, ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಗೌಡ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ಕ್ಷೇತ್ರದ ಎಲ್ಲ 15 ಸುತ್ತಿನ ಮತಎಣಿಕೆ ಕಾರ್ಯ ಮುಗಿದಿದ್ದು, ಕಾಂಗ್ರೆಸ್ ಪಕ್ಷದ ಗೋಪಾಲಕೃಷ್ಣ ಅವರು ಬರೋಬ್ಬರಿ 33, 144 ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಕ್ಷೇತ್ರದಲ್ಲಿ ಸತತ ನಾಲ್ಕು ಭಾರಿ ಜಯದಾಖಲಿಸಿದ್ದ ಗೋಪಾಲಕೃಷ್ಣ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು. ಗಣಿ ಧಣಿ ಜನಾರ್ಧನ ರೆಡ್ಡಿ ಅವರ ಆಪ್ತ ಸ್ನೇಹಿತ ಶ್ರೀರಾಮುಲು ಅವರ ಬಲಗೈ ಬಂಟ ಎಂದೇ ಬಿಂಬಿತವಾಗಿರುವ ಬಿಜೆಪಿ ಪಕ್ಷದ ಓಬಳೇಶ್ ಅವರು ಪ್ರಸಕ್ತ ಚುನಾವಣೆಯಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಿದ್ದು, ಒಟ್ಟು 50,795 ಮತಗಳನ್ನು ಪಡೆದಿದ್ದಾರೆ.

