ಮಂಗಳೂರು: ಸಂವಿಧಾನಕ್ಕೆ ಬೆಲೆ ಕೊಡೋದು ಪ್ರತಿಯೊಬ್ಬರ ಕರ್ತವ್ಯ. ಸಂವಿಧಾನದ ಪ್ರಕಾರ ನಾವು ನಡೆದುಕೊಳ್ಳುತ್ತೇವೆ. ಯಾರು ಎಷ್ಟೇ ಶಕ್ತಿವಂತರಿದ್ದರೂ ಬಲಾಢ್ಯರಿದ್ದರೂ ತಪ್ಪು ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮಂಗಳೂರು ಸಹಾಯಕ ಆಯುಕ್ತ ಹಾಗೂ ಚುನಾವಣಾಧಿಕಾರಿ ಮಹೇಶ್ ಕರ್ಜಗಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆಗೆ ಮಣ್ಣು ಹಾಕಿ ಎಂಬ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪ್ರಚೋದಕಕಾರಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.
ಬ್ಲಾಕ್ ಕಾಂಗ್ರೆಸ್ ಈ ಕುರಿತಾಗಿ ದೂರನ್ನು ಎಲೆಕ್ಷನ್ ಕಮೀಷನ್ ಗೆ ಕೊಟ್ಟಿದ್ದಾರೆ. ಈ ಕುರಿತಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನೀತಿ ಸಂಹಿತೆಗೆ ಮಣ್ಣು ಹಾಕಿ ಎಂದರೆ ನೀತಿ ಸಂಹಿತೆ ಇರೋದು ಯಾತಕ್ಕೆ ಎಂದು ಪ್ರಶ್ನಿಸಿದ ಅವರು, ಯಾರು ಎಷ್ಟೇ ಬಲಾಢ್ಯರಾದರೂ ತಪ್ಪು ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

