ಬಂಟ್ವಾಳ: ತಾಲ್ಲೂಕಿನ ಕುದ್ಕೋಳಿ-ಸಿದ್ಧಕಟ್ಟೆ ರಸ್ತೆ ನಡುವಿನ ಮಾಡಮೆ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತರಿಬ್ಬರು ದಾರಿ ಕೇಳುವ ನೆಪದಲ್ಲಿ ಪಾದಚಾರಿ ಮಹಿಳೆಯೊಬ್ಬರ ಕತ್ತಿನಿಂದ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ಬುಧವಾರ ನಡೆದಿದೆ.

ಇಲ್ಲಿನ ನಿವಾಸಿ ದಿವಂಗತ ಸೋಮಪ್ಪ ಪೂಜಾರಿ ಎಂಬವರ ಪತ್ನಿ ದೇವಕಿ (66) ಎಂಬವರು ಬುಧವಾರ ಮಧ್ಯಾಹ್ನ ವೇಳೆ ಮಾಡಮೆ ರಸ್ತೆಯಲ್ಲಿ ಬಸ್ಸಿನಿಂದ ಇಳಿದು ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಕಪ್ಪು ಬಣ್ಣದ ಹೋಂಡಾ ಆಕ್ಟಿವಾ ವಾಹನದಲ್ಲಿ ಬಂದಿದ್ದ ಯುವಕರಿಬ್ಬರ ಪೈಕಿ ಒಬ್ಬಾತ ಇಳಿದು ದಾರಿ ಕೇಳುವ ನೆಪದಲ್ಲಿ ಮಾತನಾಡುತ್ತಿದ್ದಂತೆಯೇ ಬೈಕಿನಲ್ಲಿದ್ದ ಯುವಕ ಇಳಿದು ಬಂದು ಮಹಿಳೆಯ ಕತ್ತಿನಿಂದ ರೂ 70ಸಾವಿರ ಮೌಲ್ಯ ಕನಕಮಾಲೆ ಚಿನ್ನದ ಸರ ಎಳೆದು ತೆಗೆದ ಬಳಿಕ ಅದೇ ದ್ವಿಚಕ್ರ ವಾಹನದಲ್ಲಿ ಇಬ್ಬರೂ ಪರಾರಿಯಾಗಿದ್ದಾರೆ ಪುಂಜಾಲಕಟ್ಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸರಣಿ ಕಳವು:
ಕಳೆದ ವರ್ಷವೂ ಇದೇ ರಸ್ತೆಯ ಕೋರ್ಯಾರು ಎಂಬಲ್ಲಿ ರಸ್ತೆಯಲ್ಲಿ ಸಂಜೆ ಹಾಲು ಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಿಂದ ಇದೇ ಮಾದರಿಯಲ್ಲಿ ಅಪರಿಚಿತ ಯುವಕರಿಬ್ಬರು ಚಿನ್ನದ ಸರ ಎಗರಿಸಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಐದು ತಿಂಗಳ ಹಿಂದೆಯಷ್ಟೇ ಇಲ್ಲಿಗೆ ಸಮೀಪದ ರಾಯಿ-ಕೈತ್ರೋಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಕತ್ತಿನಿಂದಲೂ ಇಬ್ಬರು ಅಪರಿಚಿತ ಯುವಕರು ದ್ವಿಚಕ್ರ ವಾಹನದಲ್ಲಿ ಬಂದು ನಾಲ್ಕು ಪವನ್ ತೂಕದ ಚಿನ್ನರ ಸರ ಎಗರಿಸಿ ಸಿದ್ಧಕಟ್ಟೆ ರಸ್ತೆಯಲ್ಲಿ ಪರಾರಿಯಾಗಿದ್ದಾರೆ. ಆದರೆ ಈ ಪೈಕಿ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳರನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

By suddi9

Leave a Reply

Your email address will not be published. Required fields are marked *