ಕೈಕಂಬ: ಕುಡುಪು ಶ್ರೀ ಅನಂತ ಪದ್ಮನಾಭ ಕ್ಷೇತ್ರದಲ್ಲಿ ಇಂದಿನಿಂದ(ಫೆ. 18) ಫೆ. 25ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಸುಸೂತ್ರವಾಗಿ ನಡೆಯುವ ಉದ್ದೇಶದಿಂದ ಫೆ. 17ರಂದು ದೇವಸ್ಥಾನದಲ್ಲಿ “ಮಾಧ್ಯಮ ಕೇಂದ್ರ” ಉದ್ಘಾಟಿಸಲಾಯಿತು.
ಇಲ್ಲಿಗೆ ಆಗಮಿಸುವ ಭಕ್ತರೆಲ್ಲರಿಗೆ ಬೇಸರವಾಗದ ರೀತಿಯಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಅತ್ಯಂತ ಸಂಯಮದಿಂದ ವರ್ತಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಮಾಧ್ಯಮ ಕೇಂದ್ರ ಉದ್ಘಾಟಿಸಿದ ಕುಡಪು ದೇವಳದ ಪ್ರಧಾನ ತಂತ್ರಿಗಳಾದ ನರಸಿಂಹ ತಂತ್ರ ಮನವಿ ಮಾಡಿದರು.
ದೇವಸ್ಥಾನದ ಆಸುಪಾಸಿನಲ್ಲಿ ಮೂರು ನಿರ್ದಿಷ್ಟ ಜಾಗದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಯಾರೂ ನಿಯಮ ಉಲ್ಲಂಘಿಸುವಂತಿಲ್ಲ. ಪ್ರತಿದಿನ ಮೂರು ವಿಶಾಲ ಚಪ್ಪರದಲ್ಲಿ ಭಕ್ತರಿಗೆ ಎರಡೊತ್ತು ಅನ್ನದಾನ ಮತ್ತು ಎರಡೊತ್ತು ಫಲಾಹಾರ ವ್ಯವಸ್ಥೆ ಮಾಡಲಾಗಿದೆ. ಬ್ರಹ್ಮಕಲಶೋತ್ಸವದಲ್ಲಿ ಭಕ್ತರ ಸಂತೃಪ್ತಿಯೇ ನಮ್ಮ ತೃಪ್ತಿ. ಯಾವುದೇ ಮಾಹಿತಿ ಪಡೆಯಲು ಕೇಂದ್ರದಲ್ಲಿ ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನದ ಎರಡು ಕಂಪ್ಯೂಟರ್, ಇಂಟರ್ನೆಟ್ ವ್ಯವಸ್ಥೆ ಮಾಡಲಾಗಿದೆ ಎಂದು ಕುಡುಪು ಬ್ರಹ್ಮಕಲಶೋತ್ಸವ ಪ್ರಚಾರ ಸಮಿತಿ ಪ್ರಮುಖರಾದ ವಾಸುದೇವ ಭಟ್ ವಿವರಿಸಿದರು.
ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸಹಕರಿಸಲಿದೆ. ಜೊತೆಗೆ ಸ್ವಯಂ-ಸೇವಕರೂ ನಮ್ಮೊಂದಿಗಿದ್ದಾರೆ. ಕಳ್ಳತನ ಅಥವಾ ಇತರ ಯಾವುದೇ ರೀತಿಯ ಅಪರಾಧ ಚಟುವಟಿಕೆ ಪತ್ತೆ ಹಚ್ಚಲು ವಿವಿಧ ಕಡೆಗಳಲ್ಲಿ 15 ಸೀಸಿಟೀವಿ ಕ್ಯಾಮರಾ ಅಳವಡಿಸಲಾಗಿದೆ. ವಿಶೇಷ ತಂತ್ರಜ್ಞಾನ ಹೊಂದಿರುವ ಈ ಕೇಂದ್ರದಲ್ಲಿ ಭಗವದ್ಭಕ್ತರಿಗೆ ಅಗತ್ಯವಿರುವ ಎಲ್ಲ ಮಾಹಿತಿ ಲಭ್ಯವಾಗಲಿದೆ ಎಂದು ಉದ್ಘಾಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಸುದರ್ಶನ ಕೆ. ಮಾಹಿತಿ ನೀಡಿದರು.
ವೇದಿಕೆಯಲ್ಲಿ ಮಂಜುನಾಥ ಭಂಡಾರಿ, ವಾಸುದೇವ ಭಟ್, ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ, ಉಮೇಶ್ ರೈ, ಭಾಸ್ಕರ ಕೆ, ಚಂದ್ರಹಾಸ ಶೆಟ್ಟಿ, ಸುಧಾಕರ ಶೆಟ್ಟಿ ಹಾಗೂ ಓಂ ಪ್ರಕಾಶ್, ಹರಿಪ್ರಸಾದ ಶೆಟ್ಟಿ ಮತ್ತಿತರರು ಇದ್ದರು.
