ಕೈಕಂಬ: ಇತಿಹಾಸ ಪ್ರಸಿದ್ಧ ಕುಡುಪು ಶ್ರೀ ಅನಂತ ಪದ್ಮನಾಭ ಕ್ಷೇತ್ರದಲ್ಲಿ ಫೆ. 18ರಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭಗೊಂಡು ಫೆ. 25ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕಾಗಿ ದೇವಸ್ಥಾನದಲ್ಲಿ ಚಪ್ಪರ, ಹೊರೆಕಾಣಿಕೆ ಉಗ್ರಾಣ, ಪಾಕಶಾಲೆ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಉಳಿದಂತೆ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ಬಹುತೇಕ ಕೆಲಸ ಮುಕ್ತಾಯಗೊಂಡಿದೆ.
ನಾಗಬನದ ಉತ್ತರ ದಿಕ್ಕಿನಲ್ಲಿ ಹೊರೆಕಾಣಿಕೆ ಉಗ್ರಾಣ, ನಾಗಬನದ ಹಿಂಬದಿಯಲ್ಲಿ `ಸ್ಕಂದಶ್ರೀ’ ಭೋಜನಶಾಲೆ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಕೆರೆಯ ದಕ್ಷಿಣ ದಿಕ್ಕಿನಲ್ಲಿ ಶ್ರೀ ಅನಂತ ಪದ್ಮನಾಭ ಮುಖ್ಯ ವೇದಿಕೆ ರಚಿಸಲಾಗಿದ್ದು, ಇದರಲ್ಲಿ ಪ್ರತಿನಿತ್ಯ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ದೇವಸ್ಥಾನದ ಹೊರಾಂಗಣದ ವಾಯುವ್ಯ ಮೂಲೆಯಲ್ಲಿ ನಿರ್ಮಿಸಲಾದ ಮತ್ತೊಂದು ಭವ್ಯ ವೇದಿಕೆಯಲ್ಲಿ ಪ್ರತಿನಿತ್ಯ ಶಾಸ್ತ್ರೀಯ ಸಂಗೀತ ಹಾಗೂ ಭಜನಾ ಕಾರ್ಯಕ್ರಮ ಜರುಗಲಿದೆ.
ಪಾರ್ಕಿಂಗ್ ವ್ಯವಸ್ಥೆ
ಮಂಗಳೂರು ಕಡೆಯಿಂದ ಆಗಮಿಸುವವರ ವಾಹನ ಪಾರ್ಕಿಂಗಿಗೆ ಕುಡುಪು ಸೇತುವೆಯ ಎದುರುಗಡೆಯಲ್ಲಿರುವ ಭಟ್ರ ಕಲ್ಲುರ್ಟಿ ದೈವಸ್ಥಾನದ ಬಯಲಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೂಡಬಿದ್ರೆ, ವಾಮಂಜೂರು ಕಡೆಯಿಂದ ಬರುವ ವಾಹನಗಳ ನಿಲುಗಡೆಗೆ ದೇವಸ್ಥಾನದ ಹತ್ತಿರವಿರುವ ರಥಬೀದಿ ಕೊನೆಯಲ್ಲಿರುವ ಗದ್ದೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಕುಡುಪು ಸೇತುವೆಯ ಹತ್ತಿರವಿರುವ ಬಸ್ಸಿನ ಗ್ಯಾರೇಜಿನ ಬಳಿ ವಿಶೇಷ ಪಾರ್ಕಿಂಗ್, ವ್ಯಾಪಾರ ಮಳಿಗೆ(ಸಂತೆ) ಹಾಗೂ ಅಮ್ಯೂಸ್ಮೆಂಟ್ ಪಾರ್ಕುಗಳ ವ್ಯವಸ್ಥೆ ಮಾಡಲಾಗಿದೆ. ಅಂತೆಯೇ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಮಂಗಳೂರು ಕಡೆಯಿಂದ ಆಗಮಿಸುವ ಬಸ್ಸುಗಳಿಗೆ ಕುಡುಪು ದೇವಸ್ಥಾನದ ಎದುರಿಗೆ ಬದಲಾಗಿ ಕುಡುಪು ಸೇತುವೆ ಬಳಿ ನಿಲುಗಡೆ ಮಾಡಲಾಗಿದ್ದು, ಭಕ್ತಾದಿಗಳು ಅಲ್ಲಿಂದ ಮುಂದಕ್ಕೆ ದೇವಸ್ಥಾನದವರೆಗೆ ನಡೆದುಕೊಂಡು ಸಾಗಬೇಕು.
ಮೂಡಬಿದ್ರೆ, ವಾಮಂಜೂರು ಕಡೆಯಿಂದ ಬರುವ ಬಸ್ಸುಗಳನ್ನು ಕಡುಪು ಮಿತ್ರಮಂಡಳಿ ಎದುರು ನಿಲುಗಡೆಗೆ ಅವಕಾಶ ಮಾಡಲಾಗಿದೆ. ಕುಡುಪು ಕಟ್ಟೆಯಿಂದ ಮಂಗಳಜ್ಯೋತಿವರೆಗೆ ರಸ್ತೆಯ ಇಕ್ಕೆಲದಲ್ಲಿ ವಾಹನ ನಿಲ್ಲಿಸಲು ಅವಕಾಶವಿಲ್ಲ.
ಎಲ್ಲ ಪಾರ್ಕಿಂಗ್ ಸ್ಥಳಗಳಲ್ಲಿ ಶೌಚಾಲಯ, ನೀರು, ಕಸದ ತೊಟ್ಟಿಯ ವ್ಯವಸ್ಥೆ ಮಾಡಲಾಗಿದ್ದು, ಸ್ವಚ್ಚತೆಗೆ ದೊಡ್ಡ ಮಟ್ಟದಲ್ಲಿ ಆದ್ಯತೆ ನೀಡಲಾಗಿದೆ. ಇದೇ ವೇಳೆ ಫೆ. 21ರಿಂದ ಫೆ. 25ರವರೆಗೆ ನಾಗತಂಬಿಲ, ಪಂಚಾಮೃತ ಅಭಿಷೇಕ, ಪಂಚಕಚ್ಚಾಯ ಮೊದಲಾದ ಸೇವೆ ನಡೆಯುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ.

