ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕದಲ್ಲಿ ಕಳೆದ ಆರು ತಿಂಗಳ ಹಿಂದೆ ನಡೆದ ಮುಸ್ಲಿಂ ಯುವಕರೊಬ್ಬರಿಗೆ ಚಾಕು ಇರಿತ ಪ್ರಕರಣ ಸೇರಿದಂತೆ ಯಾವುದೇ ಘರ್ಷಣೆಯಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ ಕೇವಲ ಹಿಂದೂ ಧರ್ಮದ ಬಗ್ಗೆ ವಿಶೇಷ ಶ್ರದ್ಧೆ ಮತ್ತು ಆರ್‍ಎಸ್‍ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಅವರಿಗೆ ಹಿಂದೆ ಸಚಿವ ಬಿ.ರಮಾನಾಥ ರೈ ನಿಂದಿಸಿರುವುದನ್ನು ಆಕ್ಷೇಪಿಸಿದ್ದಾರೆ ಎಂಬ ಕಾರಣಕ್ಕಾಗಿ ನನ್ನ ಪುತ್ರ ಮಿಥುನ್ ಕಲ್ಲಡ್ಕ ಎಂಬಾತನನ್ನು ಪೊಲೀಸರು ರಾಜಕೀಯ ಪ್ರೇರಿತವಾಗಿ ನಕಲಿ ಎನ್‍ಕೌಂಟರ್ ಮೂಲಕ ಮುಗಿಸಲು ಸಂಚು ಹೂಡಿದ್ದಾರೆ ಎಂದು ಈತನ ತಾಯಿ ಲಲಿತಾ ಪೂಜಾರಿ ಆರೋಪಿಸಿದ್ದಾರೆ.27btl-Kalladka

ಬಿ.ಸಿ.ರೋಡಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಹಿಂದೆಯೂ ಈತನ ವಿರುದ್ಧ ಹಲವು ಬಾರಿ ಸುಳ್ಳು ದೂರು ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಮತ್ತೆ ಆತನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ‘ಕಮ್ಯೂನಲ್ ಗೂಂಡಾ’ ಪಟ್ಟಿಗೆ ಸೇರ್ಪಡೆಗೊಳಿಸಿ ನಕಲಿ ಎನ್‍ಕೌಂಟರ್ ನಡೆಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಪೊಲೀಸರು ಈತನ ವಿರುದ್ಧ ದಾಖಲಿಸಿಕೊಂಡ ಸುಳ್ಳು ಪ್ರಕರಣವನ್ನು ನ್ಯಾಯಾಲಯವು ರದ್ದುಗೊಳಿಸಿದೆ. ಈ ನಡುವೆ ಪೊಲೀಸರು ಮತ್ತೆ ದಾಖಲಿಸಿಕೊಂಡಿದ್ದ ಸುಳ್ಳು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ 3ರಂದು ಜಾಮೀನು ದೊರೆತಿದೆ. ಇದೀಗ ಜಿಲ್ಲೆಯ ದಕ್ಷ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ವರ್ಗಾವಣೆಗೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ರಾಜಕೀಯ ಪ್ರೇರಿತ ಪೊಲೀಸ್ ಅಧಿಕಾರಿಗಳು ಆತನನ್ನು ಜೈಲಿನಿಂದ ಹೊರಗೆ ಬಾರದಂತೆ ತಡೆಯಲು ಇದೇ 13ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿ ದೌರ್ಜನ್ಯ ಎಸಗಿರುವುದು ತಿಳಿದು ಬಂದಿದೆ ಎಂದರು.

ಈ ಹಿಂದೆ ದೀಪಕ್ ರಾವ್ ಹತ್ಯೆ ಬಳಿಕ ನಡೆದ ಬಶೀರ್ ಹತ್ಯೆಯನ್ನು ಮಂಗಳೂರಿನ ಕಂಕನಾಡಿ ಜಾತ್ರೆಗೆ ಬಂದಿದ್ದ ಯುವಕರ ತಂಡವೊಂದು ಮಾಡಿದೆ ಎಂದು ಹೇಳಿಕೆ ನೀಡಿದ್ದ ಪೊಲೀಸ್ ಅಧಿಕಾರಿಗಳು ಇದೀಗ ಮಿಥುನ್ ಹಣಕ್ಕಾಗಿ ಜೈಲಿನಲ್ಲೇ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಕಟ್ಟು ಕಥೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.

ಇದಕ್ಕೂ ಮೊದಲು ಈತನನ್ನು ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡರೆ ಆರ್ಥಿಕ ನೆರವಿನ ಜೊತೆಗೆ ಎಲ್ಲಾ ಕೇಸುಗಳಿಂದಲೂ ಮುಕ್ತಿ ನೀಡುವುದಾಗಿ ಕಾಂಗ್ರೆಸ್ಸಿನಿಂದ ಬಂದಿದ್ದ ಆಮಿಷ ತಿರಸ್ಕರಿಸಿದ್ದಾನೆ ಎಂದು ಅವರು ಸ್ಪಷ್ಟಪಡಿಸಿದರು.ಮಿಥುನ್ ತಂದೆ ನಾರಾಯಣ ಪೂಜಾರಿ, ಸಹೋದರ ಪವನ್ ಇದ್ದರು.

By suddi9

Leave a Reply

Your email address will not be published. Required fields are marked *