ಹೊಳಲ್ಕೆರೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ಕೇಂದ್ರ ಸರ್ಕಾರ ಯಾವ ನೆರವನ್ನೂ ನೀಡಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅವರಿಗೆ ಲೆಕ್ಕ ಕೊಡಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಪಟ್ಟಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರ ನೀಡಿದ ಹಣವನ್ನು ಕಾಂಗ್ರೆಸ್ ನವರು ನುಂಗಿ ನೀರು ಕುಡಿದಿದ್ದಾರೆ. ಈಗ ರಾಜ್ಯಕ್ಕೆ ಕೇಂದ್ರ ಸರ್ಕಾರ ಯಾವುದೇ ನೆರವು ನೀಡಿಲ್ಲವೆಂದು ಆರೋಪಿಸುತ್ತಿದ್ದಾರೆ. ಕರ್ನಾಟಕದ ವಿವಿಧ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ ನೀಡಿದ 3 ಲಕ್ಷ ಕೋಟಿ ರುಪಾಯಿ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಉಜ್ವಲ ಗ್ಯಾಸ್ ಯೋಜನೆ, ಮುದ್ರಾ ಯೋಜನೆ, ಸ್ವಚ್ಛ ಭಾರತ ಅಭಿಯಾನ ಮತ್ತಿತರ ಯೋಜನೆಗಳಿಗೆ ಹಣಕಾಸು ನೆರವು ನೀಡಿದೆ. ಇದರಲ್ಲಿ ಬಹುತೇಕ ಹಣವನ್ನು ಕಾಂಗ್ರೆಸ್ ನವರು ನುಂಗಿದ್ದಾರೆ ಎಂದು ಆರೋಪಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 2,19, 506 ಕೋಟಿ ರುಪಾಯಿ ಕೊಟ್ಟಿದ್ದಾರೆ. 13ನೇ ಹಣಕಾಸು ಆಯೋಗದಲ್ಲಿ ಈ ಮೊತ್ತ ಬರೀ 88,583 ರುಪಾಯಿ ಇತ್ತು. ಲೆಕ್ಕ ಕೊಡಿ ಎಂದು ಆಗ್ರಹಿಸಿದರು.
ಅರ್ಕಾವತಿ ಬಡಾವಣೆಯಲ್ಲಿನ ಹಗರಣ, ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲಿನ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ಸೇರಿ ಹಲವು ಪ್ರಕರಣಗಳನ್ನು ಪಟ್ಟಿ ಮಾಡಿ, ರಾಜ್ಯ ಸರಕಾರವನ್ನು ತರಾಟೆಗೆ ತೆಗೆದು ಕೊಂಡರು.



