ಮೂಡಬಿದಿರೆ: ಜಾತ್ಯಾತೀತ ಮನೋಭಾವವುಳ್ಳ ಜನರಿಂದಲೇ ಇಂದು ದೇಶ ಉಳಿದಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಿಳಿಸಿದ್ದಾರೆ.
ನಗರದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಮೂಡಬಿದಿರೆಯ ಒಂಟಿಕಟ್ಟೆಯಲ್ಲಿರುವ ಸಂಜೀವ ಶೆಟ್ಟಿ ಮಲ್ಟಿ ಹಾಲ್ ನಲ್ಲಿ ನಡೆಯಲಿರುವ ಸಿಪಿಎಂ 22ನೇ ರಾಜ್ಯಸಮ್ಮೇಳನದ ಅಂಗವಾಗಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಿದ್ದ ಬಹಿರಂಗ ಅಧಿವೇಶವನ್ನು ಉದ್ದೇಶಿಸಿ ಅವರು ಮಾನಾಡಿದರು.
ಅನಂತಕುಮಾರ್ ಹೆಗಡೆ ಕೇಂದ್ರದ ಮಂತ್ರಿಯಾಗುವ ಮುನ್ನ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಕೈಗೊಂಡದನ್ನು ಮರೆತು ಇದೀಗ ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದು, ಅಲ್ಲದೆ, ಜಾತ್ಯಾತೀತರನ್ನು ಹೀಯಾಳಿಸುವ ನಿಟ್ಟಿನಲ್ಲಿ ಹೇಳಿಕೆಯನ್ನು ಕೂಡ ನೀಡಿದ್ದಾರೆ. ಈ ದೇಶ ಜಾತ್ಯಾತೀತ ಜನರಿಂದಲೇ ಉಳಿದಿದೆ ಎಂಬುದನ್ನು ಅವರು ಮೊದಲು ಮನದಟ್ಟು ಮಾಡಲಿ ಎಂದರು.
ದೇಶ ಹಿಂದೆಂದೂ ಕಾಣದಂತಹ ಕೋಮುವಾದಿ ಧ್ರುವೀಕರಣದ ಅಪಾಯ ಎದುರಿಸುತ್ತಿದ್ದು, ಇದರಿಂದ ಜನರ ದೈನಂದಿನ ಸಮಸ್ಯೆಗಳು ಬದಿಗೆ ಸರಿಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಿಪಿಎಂ ಮುಖಂಡ ಬಾಲಕೃಷ್ಣ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮ, , ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಎಸ್. ವರಲಕ್ಷ್ಮೀ, ಮುನೀರ್ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.


