ಸುದ್ದಿ9ಬಂಟ್ವಾಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಕಂಭ ಘಟಕ ಇದರ ಸಹಯೋಗದಲ್ಲಿ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ ಆ.9ರಂದು  ಆಟಿಡೊಂಜಿ ದಿನ ಎಂಬ ಕಾರ್ಯಕ್ರಮವು ನೆರವೇರಿತು.
ಆಟಿ ತಿಂಗಳ ಹೆಮ್ಮೆಯ ಕಲೆಗಳಾದ ಆಟಿ ಕೆಳೆಂಜ ಮಾದಿರ ಕುಣಿತ ಹಾಗೂ ಹುಲಿವೇಷ ಕುಣಿತವು ಆಕರ್ಷಿಸಿತು. ಇವುಗಳಿಗೆ ಮಾನಾದಿಗೆ ನೀಡುವ ಮೂಲಕ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಉದ್ಘಾಟಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಮೇಲ್ವಿಚಾರಕರಾದ ಶ್ರೀಯುತ ಗಂಗಾಧರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಟಿ ತಿಂಗಳ ವಿಶಿಷ್ಟ ಆಚರಣೆಗಳು, ಬದಲಾಗುತ್ತಿರುವ ಜೀವನ, ಸಂಪ್ರದಾಯದ ನೆಲೆಯಲ್ಲಿ ಉಳಿಸಿ ಬೆಳೆಸಲಾಗುತ್ತಿರುವ ಹಲವು ಕಟ್ಟಳೆಗಳ ಕುರಿತು ಮಾತನಾಡಿ ಹಿರಿಯರು ಇವುಗಳನ್ನು ಬೆಳೆಸಲು ಕಾರಣ ಹಾಗೂ ವಿಜ್ಞಾನ ಬೆಳೆದಂತೆ ಮರೆಯಾಗುತ್ತಿರುವ ಹಲವು ಕಲೆಗಳ ಬಗ್ಗೆ ತಮ್ಮ ಮಾತುಗಳಲ್ಲಿ ತಿಳಿಸಿದರು.
ಅತಿಥಿಗಳಾಗಿರುವ ವೀರಕಂಭ ಒಕ್ಕೂಟದ ಅಧ್ಯಕ್ಷರಾದ ಶ್ರೀ ಹರೀಶ್ ಬಂಗೇರ ಬೆತ್ತಸರವು ಇವರು ಆಟಿಯ ಖಾದ್ಯಗಳು, ಅವುಗಳಿಗಿರುವ ವೈಜ್ಞಾನಿಕ ಕಾರಣಗಳನ್ನು ತಿಳಿಸುತ್ತಾ ಮಹತ್ವವನ್ನು ವಿವರಿಸಿದರು.
ಶಿಕ್ಷಣ ಇಲಾಖೆಯಿಂದ ಆಗಮಿಸಿದ್ದ ಕಲ್ಲಡ್ಕ ವಲಯದ ಸಂಪನ್ಮೂಲ ವ್ಯಕ್ತಿ ಶ್ರೀಯುತ ಉದಯಕುಮಾರ್ ಇವರು ಈ ಕಾರ್ಯಕ್ರಮವು ಬಂಟ್ವಾಳ ತಾಲೂಕಿನ ಶಿಕ್ಷಣಾಧಿಕಾರಿಯವರು ವಿಶೇಷ ಒಲವಿನಿಂದ ಪ್ರಾರಂಭಿಸಲಾದ ಕಾರ್ಯಕ್ರಮ, ಇದನ್ನು ಆಚರಿಸುವುದರೊಂದಿಗೆ ಇಂದಿನ ಮಕ್ಕಳಿಗೆ ತಮ್ಮ ಹಿರಿಯರು ಬೆಳೆಸಿಕೊಂಡು ಬಂದಿರುವ ಸಂಪ್ರದಾಯಗಳಿಗೆ ಆಚರಣೆಗಳಿಗೆ ಸಂಬಂಧೀಕರಿಸಲು ಸಾಧ್ಯ ಹಾಗೂ ಮುಂದೆಯೂ ಇದು ಬೆಳೆಯುವಲ್ಲಿ ಸಹಾಯಕವಾಗುವುದು ಎಂದು ತಿಳಿಸಿದರು.
ಆರೋಗ್ಯ ಕಾರ್ಯಕರ್ತ   ಪವಿತ್ರ ಇವರು ಆಟಿ ತಿಂಗಳಿನಲ್ಲಿ ಬರುವ ರೋಗ ಹಾಗೂ ಅವುಗಳ ಬಗ್ಗೆ ತೆಗೆದುಕೊಳ್ಳ ಬೇಕಾದ ಮುಂಜಾಗರೂಕತೆ, ಆಹಾರ ಪದ್ಧತಿಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ರೀತಿ ಯನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ವೀರಕಂಭ ಗ್ರಾಮ ಪಂಚಾಯತ್ನ ಅಧ್ಯಕ್ಷೆ ಆಗಿರುವ ಆಶಾಲತಾ ಇವರು ವಿಜ್ಞಾನ ವು ಬೆಳೆದಂತೆ ಬದಲಾಗುತ್ತಿರುವ ಆಹಾರ ಕ್ರಮ, ಜಂಕ್ ಫುಡ್ಗಳ ಮೇಲೆ ಒಲವು ಹೆಚ್ಚುತ್ತಿರುವುದರಿಂದ ಆರೋಗ್ಯ ಸಮಸ್ಯೆಯು ಹೆಚ್ಚುತ್ತಿರುವುದರ ಬಗ್ಗೆ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಾದ  ಬಾಗಿ ಮಂಗಿಲಪದವು ಮತ್ತು  ಭವಾನಿ ಕೇಪುಳಕೋಡಿ ಇವರು ಜನಪದ ಕಲೆ ಪಾಡ್ದನವನ್ನು ಹಾಡಿದರು.  ಭವಾನಿ ಇವರು ಔಷಧೀಯ ಸಸ್ಯಗಳನ್ನು ಪರಿಚಯಿಸಿದರು. ಆಟಿ ತಿಂಗಳ ವಿಷೇಶತೆಯನ್ನು ವಿದ್ಯಾರ್ಥಿಗಳ ಪರವಾಗಿ ಕುಸುಮಾವತಿ ಇವರು ಪ್ರಸ್ತುತ ಪಡಿಸಿದರು. ಶಿಕ್ಷಕಿ ಶಕುಂತಲಾ ಇವರು ಆಟಿ ಕುಲ್ಲುನ ವಿಷಯವಾಗಿ ಹಾಡಿನ ಮೂಲಕ ರಂಜಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಮ್.ಸಿಯ ಅಧ್ಯಕ್ಷರಾದ ಶ್ರೀ ಮೋನಪ್ಪ, ಗ್ರಾಮ ಪಂಚಾಯತ್ನ ಸದಸ್ಯರಾದ ಶ್ರೀ ವೀರಪ್ಪ , ಚಂದ್ರಿಕಾ,  ಜಯಂತಿ ಹಾಗೂ ಗ್ರಾಮಾಭಿವೃದ್ಧಿ ಸಮಿತಿಯ ಸೇವಾ ಪ್ರತಿನಿಧಿಯಾಗಿರುವ ಶ್ರೀಮತಿ ಗಿರಿಜಾ ಭಾಗವಹಿಸಿದ್ದರು. ಊರಿನ ಪ್ರತೀ ಮನೆಯಿಂದ ಆಟಿ ತಿಂಗಳ ಖಾದ್ಯಗಳಾದ ಪತ್ರೊಡೆ, ಚೇಟ್ಲ, ತಿಮರೆ ಚಟ್ನಿ, ನೀರುಕುಕ್ಕು ಚಟ್ನಿ, ಪದೆಂಗಿ ಕಣಿಲೆ ಗಸಿ, ಚಲ್ಲಾಂಗಾಯಿ ಮುಂತಾದ ಸುಮಾರು ಐವತ್ತು ಬಗೆಯ ಖಾದ್ಯ ಗಳನ್ನು ತಯಾರಿಸಿ ತಂದು ನಂತರ ಸಹಭೋಜನ ನಡೆಸಲಾಯಿತು.
ಅತಿಥಿಗಳಿಗೆ ವೀಳ್ಯ, ಅಡಿಕೆ, ಹಿಂಗಾರ ಕೊಡುವ ಮೂಲಕ ಮುಖ್ಯ ಶಿಕ್ಷಕಿ  ಶಕುಂತಲಾ ಇವರು ವಿಶಿಷ್ಟವಾಗಿ ಸ್ವಾಗತಿಸಿದರು. ಸಹ ಶಿಕ್ಷಕಿ  ಸಿಸಿಲಿಯಾ ಇವರು ಧನ್ಯವಾದವಿತ್ತರು. ಶಿಕ್ಷಕಿ ಸಂಗೀತಾ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.
ಶಿಕ್ಷಕಿ ಕುಮಾರಿ ಗೀತಾ ಹಾಗೂ ಕುಮಾರಿ ಜ್ಯೋತಿ ಇವರು ಸಹಕರಿಸಿದರು.

DSC_2118

 

By suddi9

Leave a Reply

Your email address will not be published. Required fields are marked *