ಬಂಟ್ವಾಳ: ಯಾವುದೇ ವಿಚಾರಗಳನ್ನು ಮನಸ್ಸಿಗೆ ಸಕಾರಾತ್ಮಕವಾಗಿ ತೆಗೆದುಕೊಂಡರೆ ಅದು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ ಎಂದು ವಿಟ್ಲ ಮೈತ್ರೇಯ ಗುರುಕುಲದ ಅಮೃತ ವರ್ಷಿಣಿ ಮಾತಾಜಿ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಬಿ.ಸಿ.ರೋಡ್ ನ ಅಜ್ಜಿಬೆಟ್ಟು ಅಕ್ಕಮಹಾದೇವಿ ಶಿಶು ಮಂದಿರದಲ್ಲಿ ನಡೆದ ಗೋಕುಲೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು. ಮಕ್ಕಳಿಗೆ ಹಿಂದು ಧರ್ಮದ ಪರಂಪರೆ ಬಗ್ಗೆ ಸಮರ್ಪಕವಾಗಿ ಅರ್ಥೈಸಿಕೊಟ್ಟರೆ, ಅವರು ಇದೇ ಹಾದಿಯಲ್ಲಿ ಮುನ್ನಡೆಯುತ್ತಾರೆ. ಯಾಕೆಂದರೆ ಹಿಂದು ಧರ್ಮದಲ್ಲಿರುವುದು ನಂಬಿಕೆಯಲ್ಲ ಸತ್ಯ ಎಂದು ವಿವರಿಸಿದರು.
ನಮ್ಮ ಸರಕಾರಗಳು ಮಕ್ಕಳ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದು ಮಕ್ಕಳ ಸಂಪೂರ್ಣ ರಕ್ಷಣೆಗೆ ಕಟಿಬದ್ಧವಾಗಿದ್ದು, ಮಕ್ಕಳು ಭವ್ಯ ಭಾರತದ ಸತ್ಪ್ರಜೆ ಹಾಗೂ ರಾಷ್ಟ್ರ ಭಕ್ತ ನಾಗರಿಕರಾಗಿ ಮುಂದುವರಿಯಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಗ್ರಾಹಕ ನಿತ್ಯಪ್ರಕಾಶ್ ಬಂಟ್ವಾಳ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಪಠ್ಯದ ಚಟುವಟಿಕೆಗಳೊಂದಿಗೆ ದೇಶ ಭಕ್ತಿಯ ಚಿಂತನೆಯನ್ನು ಮೂಡಿಸುವಂತಹ ಕ್ರಾರ್ಯಕ್ರಮವನ್ನು ನಡೆಸಬೇಕು. ಇದರಿಂದ ದೇಶ ‘ಸೂಪರ್ ಪವರ್’ ಆಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ವಿಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ., ಕೆಲವೊಂದು ಸಂದರ್ಭದಲ್ಲಿ ಮಕ್ಕಳು ತಮಗಿರುವ ಗೊಂದಲಗಳನ್ನು ಸರಿಪಡಿಸಲು ಪೋಷಕರಿಗೆ ಅಥವಾ ಶಿಕ್ಷಕರ ಪ್ರಶ್ನೆಗಳನ್ನು ಮುಂದಿಟ್ಟಾಗ ನಾವು ಅವರಿಗೆ ಸಮರ್ಥವಾಗಿ ಉತ್ತರಿಸಿದರೆ ಮಕ್ಕಳು ಉತ್ತಮವಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಸೇವಾ ಭಾರತಿ ಇದರ ಅಧ್ಯಕ್ಷ ಕೆ. ರಮೇಶ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಕೋಶಾಧಿಕಾರಿ ಅಜಯ್ ಕೊಂಬ್ರಬೈಲು ಹಾಗೂ ಬಂಟ್ವಾಳ ಗೋಕುಲೋತ್ಸವ ಸಮಿತಿಯ ಅಧ್ಯಕ್ಷ ವಿ.ಪ್ರಭಾಕರ ಪೈ, ಪ್ರ. ಕಾರ್ಯದರ್ಶಿ ಸೂರ್ಲ ವಾಮನ ಪೂಜಾರಿ ಮಣಿಕಂಠಪುರ, ಕೋಶಾಧಿಕಾರಿ ಸಂತೋಷ್ ಕುಮಾರ್ ನೆತ್ತರಕೆರೆ, ಉಪಾಧ್ಯಕ್ಷರುಗಳಾದ ಮಾಧವ ವಳವೂರು, ಶ್ರೀಕಲಾ ಜಾರಂದಗುಡ್ಡೆ, ಕುಸುಮ ಅರಳ, ರಾಮಕೃಷ್ಣ ಪ್ರಭು ವಗ್ಗ, ಕಾರ್ಯದರ್ಶಿ ವೀಣಾ ರಮೇಶ್ ಕೊಡ್ಮಾಣ್, ವಿದ್ಯಾಭಟ್ ಪಲ್ಲಿಪಾಡಿ ಹಾಗೂ ಬಂಟ್ವಾಳ ತಾಲೂಕಿನ ಸೇವಾ ಭಾರತಿ ಇದರ ಟ್ರಸ್ಟಿಗಳು ಭಾಗವಹಿಸಿದ್ದರು.












