ಬಂಟ್ವಾಳ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ತ್ವರಿತಗೊಳಿಸುವುದರ ಜೊತೆಗೆ ಸಜಿಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ವೈಜ್ಞಾನಿಕ ರೀತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಪೂರಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಲಹೆಯಂತೆ ‘ಪೈರೋಲಿಸಿಸ್ ಯಂತ್ರ’ ಮತ್ತಿತರ ವಿಶೇಷ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್.ರಾಡ್ರಿಗಸ್ ಹೇಳಿದ್ದಾರೆ.
ತಾಲ್ಲೂಕಿನ ಮೆಲ್ಕಾರ್‍ನಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಐಕ್ಯತಾ ದಿನಾಚರಣೆ ಮತ್ತು ಸ್ವಚ್ಚತಾ ಆಂದೋಲನ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇನ್ನು ಇಪ್ಪತ್ತು ದಿನಗಳೊಳಗೆ ಈ ಹೊಸ ಯಂತ್ರ ಅಳವಡಿಸಲಾಗುವುದು ಎಂದರು.
ಪತ್ರಕರ್ತ ಸಂಶುದ್ದೀನ್ ಸಂಪ್ಯ ಇವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಬೂಡ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭೆ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಸಂಜೀವಿ, ಜಗದೀಶ ಕುಂದರ್, ಜೆಸಿಂತಾ ಡಿಸೋಜ, ಚಂಚಲಾಕ್ಷಿ, ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ರೋಟರಿ ಕ್ಲಬ್ ಕಾರ್ಯದರ್ಶಿ ನಾರಾಯಣ ಹೆಗ್ಡೆ, ಲಯನ್ಸ್ ಜಿಲ್ಲಾ ಸಂಯೋಜಕ ಉಮೇಶ್ ಆಚಾರ್, ದಾಮೋದರ ಬಿ.ಎಂ, ಕೋಶಾಧಿಕಾರಿ ರೋಹಿತಾಶ್ವ, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಸಮುದಾಯ ಅಭಿವೃದ್ಧಿ ಅಧಿಕಾರಿ ಮತ್ತಡಿ ಮತ್ತು ಆರೋಗ್ಯಾಧಿಕಾರಿ ರತ್ನಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಮೌನೇಶ ವಿಶ್ವಕರ್ಮ ನೇತೃತ್ವದಲ್ಲಿ ಸಂಸಾರ ಜೋಡುಮಾರ್ಗ ತಂಡದಿಂದ ಸ್ವಚ್ಚತಾ ಅರಿವು ಬಗ್ಗೆ ಬೀದಿನಾಟಕ ನಡೆಯಿತು.
