ಬಂಟ್ವಾಳ: ಪರಮ ಪೂಜ್ಯ ಶಾಂತ ಮೂರ್ತಿ ವಾತ್ಸಲ್ಯ ರತ್ನಾಕರ ಆಚಾರ್ಯ ಶ್ರೀ 108 ಸನ್ಮತಿ ಸಾಗರ ಮಹಾರಾಜರ ಶಿಷ್ಯರಾದ, ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಪಾಣೆಮಂಗಳೂರು ಶ್ರೀಅನಂತ ನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ ಭವ್ಯ ಮಂಗಲ ವರ್ಷಾಯೋಗ – ಚಾತುರ್ಮಾಸವನ್ನು ಆಚರಿಸಿರುತ್ತಾರೆ. ಆ ಪ್ರಯುಕ್ತ ದಿನಾಂಕ 22.10.2017 ಆದಿತ್ಯವಾರ ಮುನಿಶ್ರೀಗಳ ಪಾವನ ಸಾನ್ನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಸೋಂದಾ ಪರಮ ಪೂಜ್ಯ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ “ಶ್ರೀ ಸಿದ್ಧ ಪರಮೇಷ್ಠಿ ಸ್ಪಟಿಕ ಬಿಂಬ ಅಭಿಷೇಕ”ವನ್ನು ಶ್ರೀಮತಿ ಮತ್ತು ಶ್ರೀ ಧರಣೇಂದ್ರ ಇಂದ್ರ, ಮಕ್ಕಳು, ಜೈನರ ಪೇಟೆ, ಪಾಣೆಮಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಬಂಧುಗಳ ಭಾಗವಹಿಸುವಿಕೆಯಲ್ಲಿ ನಡೆಯಿತು. ಪೂರ್ವಾಹ್ನ ಮುನಿಶ್ರೀಗಳ ಆಹಾರ ಚರ್ಯೆಯಲ್ಲಿ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು.
IMG_20171024_213716
ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಮತ್ತು ಪೂಜ್ಯ ಭಟ್ಟಾರಕರು ಶ್ರೀ ಸಿದ್ಧ ಪರಮೇಷ್ಠಿ ಸ್ಪಟಿಕ ಬಿಂಬದ ಅಭಿಷೇಕವನ್ನು, ಪೂಜಾ ವಿಧಿ- ವಿಧಾನಗಳನ್ನು  ವಿವರವಾಗಿ ತಿಳಿಯಪಡಿಸಿ ಅಭಿಷೇಕ ಆರಾಧನೆಯನ್ನು ಸುಸಂಪನ್ನಗೊಳಿಸಿದರು. ಅನೇಕ ಶ್ರಾವಕರು ಈ ವೈಭವಪೂರ್ಣ ಅಭಿಷೇಕದಲ್ಲಿ ಪಾಲ್ಗೊಂಡು ಪುಣ್ಯ ಭಾಜನರಾದರು.
ಅಪರಾಹ್ನ ಪರಮ ಪೂಜ್ಯ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಧರ್ಮ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು.ಧರ್ಮ ಸಭೆಯಲ್ಲಿ ಶ್ರೀ ಕ್ಷೇತ್ರ ಸೋಂದಾ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳವರು ಮಾತನಾಡುತ್ತಾ ಗುರುಗಳ ಭಕ್ತಿಯನ್ನು ಅತ್ಯಂತ ಶೃಧ್ಧೆಯಿಂದ ಮಾಡಿದರೆ ಮುಕ್ತಿ ಪಡೆದು ಸಿದ್ಧಾತ್ಮನಾಗಲು ಸಾಧ್ಯ. ಅತ್ಯಂತ ಉತ್ತಮ ಚರ್ಯೆ ಹೊಂದಿರುವ ಗುರುಗಳ ಸೇವೆ ದುರ್ಲಭವಾದ ಈ ಕಾಲದಲ್ಲಿ ಪರಮ ಪೂಜ್ಯ 108 ಮುನಿಶ್ರೀ ವೀರ ಸಾಗರ ಮಹಾರಾಜರ ಸಾನ್ನಿಧ್ಯ ದೊರಕಿರುವುದು ಪಾಣೆಮಂಗಳೂರು ಶ್ರಾವಕರ ಪುಣ್ಯ ಎಂದರು.
ಇದೇ ಸಂದರ್ಭದಲ್ಲಿ ಪರಮ ಪೂಜ್ಯ ಮುನಿಶ್ರೀಗಳು ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳವರಿಗೆ ನೂತನ ಪಿಂಛಿಯನ್ನು ನೀಡಿ ಆಶೀರ್ವದಿಸಿದರು.
ಪರಮ ಪೂಜ್ಯ 108 ಮುನಿಶ್ರೀ ವೀರ ಸಾಗರ ಮಹಾರಾಜರು ತಮ್ಮ ಮಂಗಲ ಪ್ರವಚನದಲ್ಲಿ ಜೀವನದಲ್ಲಿ ಯಾವಾಗಲೂ ಗುರುವಾಗಿ ಬಾಳುವುದಕ್ಕಿಂತ ಶಿಷ್ಯನಾಗಿ ಇರುವುದು ಉತ್ತಮ ಎಂದರು. 
ಅಭಿಷೇಕ ಮತ್ತು ಧರ್ಮ ಸಭೆಯಲ್ಲಿ ಮಂಗಳೂರು, ಮೂಡುಬಿದಿರೆ,ವೇಣೂರು, ಧರ್ಮಸ್ಥಳ, ಕಾರ್ಕಳ, ಹಾಸನ, ಬೆಳಗಾವಿ, ಬೆಂಗಳೂರು ಮುಂತಾದ ಕಡೆಗಳಿಂದ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು.
ಚಾತುರ್ಮಾಸ ಸಮಿತಿಯ ಶ್ರೀ ರತ್ನಾಕರ್ ಜೈನ್ ಮಂಗಳೂರು,ಶ್ರೀ ಸುದರ್ಶನ್ ಜೈನ್,  ಶ್ರೀ ಧರಣೇಂದ್ರ ಇಂದ್ರ, ಶ್ರೀ ಭುವನೇಂದ್ರ ಇಂದ್ರ, ಶ್ರೀ ಸುಭಾಷ್ ಚಂದ್ರ ಜೈನ್, ಶ್ರೀ ಹರ್ಷರಾಜ್ ಬಲ್ಲಾಳ್, ಶ್ರೀ ದೀಪಕ್ ಇಂದ್ರ, ಶ್ರೀ ಕೆ. ಪ್ರವೀಣ್ ಕುಮಾರ್, ಶ್ರೀ ಆದಿರಾಜ್ ಜೈನ್, ಶ್ರೀ ಭರತ್ ರಾಜ್, ಶ್ರೀ ಬ್ರಿಜೇಶ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *