ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಸಚಿವ ಖಾದರ್ ಅಡ್ಡಿ: ಎಸ್‍ಡಿಪಿಐ ಆರೋಪ
ಬಂಟ್ವಾಳ:ತಾಲ್ಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ಪುರಸಭೆ ವತಿಯಿಂದ ನಿರ್ಮಾಣ ಹಂತದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಂಬಂಧಿಸಿದಂತೆ ಅಲ್ಲಿನ ಶಾಸಕರಾಗಿರುವ ಆಹಾರ ಸಚಿವ ಯು.ಟಿ.ಖಾದರ್ ಕುಮ್ಮಕ್ಕಿನಿಂದ ಸ್ಥಳೀಯ ಕೆಂಪು ಕಲ್ಲಿನ ಕ್ವಾರೆ ಮಾಲೀಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರ ನೇತೃತ್ವದಲ್ಲಿ ಸಜಿಪನಡು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುವ ಮೂಲಕ ಘಟಕ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಎಸ್‍ಡಿಪಿಐ ಸದಸ್ಯರು ಮಂಗಳವಾರ ಇಲ್ಲಿನ ಪುರಸಭೆಯಲ್ಲಿ ಆರೋಪಿಸಿದ್ದಾರೆ.
ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಎಸ್‍ಡಿಪಿಐ ಪುರಸಭಾ ಸದಸ್ಯ ಮಹಮ್ಮದ್ ಇಕ್ಬಾಲ್ ಮತ್ತು ಮುನೀಶ್ ಆಲಿ ಮಾತನಾಡಿ, ಈ ಬಗ್ಗೆ ಪುರಸಭೆ ಮಧ್ಯೆ ಪ್ರವೇಶಿಸಬೇಕು. ಈಗಾಗಲೇ ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ರೂ 2 ಲಕ್ಷ ಲಂಚ ನೀಡಲಾಗಿದೆ ಎಂದು ಕಾಂಗ್ರೆಸ್ ಪ್ರತಿಭಟನಾಕಾರರು ಅನಗತ್ಯ ಆರೋಪ ಮಾಡುತ್ತಿದ್ದಾರೆ. ಒಂದೆಡೆ ಇಲ್ಲಿನ ಶಾಸಕರಾಗಿರುವ ಸಚಿವ ಬಿ.ರಮಾನಾಥ ರೈ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿ ತ್ವರಿತಗೊಳಿಸಲು ಹೇಳುತ್ತಿದ್ದರೆ, ಇನ್ನೊಂದೆಡೆ ಅದೇ ಪಕ್ಷದ ಆಹಾರ ಸಚಿವ ಯು.ಟಿ.ಖಾದರ್ ಅಲ್ಲಿನ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕಾಗಿ ಇಬ್ಬರು ಸಚಿವರು ಸಹಿತ ಪುರಸಭಾಧ್ಯಕ್ಷರು ಪ್ರತ್ಯೇಕ ಸಭೆ ಕರೆದು ಅಲ್ಲಿನ ಗ್ರಾಮಪಂಚಾಯಿತಿ ಮತ್ತು ನಾಗರಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಮದು ಅವರು ಸಲಹೆ ನೀಡಿದರು.

10btl-PURASABHE
ಹಣ ವಸೂಲಿ:ಇಲ್ಲಿನ ಪುರಸಭೆಯ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಸುಮಾರು 6,500 ಮನೆಗಳಿಂದ ಪ್ರತ್ಯೇಕ ರಶೀದಿ ನೀಡಿ ರೂ 3 ಲಕ್ಷಕ್ಕಿಂತಲೂ ಮಿಕ್ಕಿ ಮೊತ್ತದ ಹಣ ಸಂಗ್ರಹ ಮಾಡುತ್ತಿದ್ದಾರೆ. ಕಳೆದ 20 ತಿಂಗಳಿನಿಂದ ಸಂಗ್ರಹವಾದ ಒಟ್ಟು ಹಣದ ಬಗ್ಗೆ ಮಾಹಿತಿ ಇದೆಯೇ? ಎಂದು ಬಿಜೆಪಿ ಸದಸ್ಯ ಬಿ.ದೇವದಾಸ ಶೆಟ್ಟಿ ಪ್ರಶ್ನಿಸಿದರು. ಪುರಸಭೆಯಲ್ಲಿ ಪ್ರತೀ ಮನೆ ಮನೆ ಕಸ ಸಂಗ್ರಹಕ್ಕೆ ರೂ 30 ಮಾತ್ರ ನಿಗದಿಪಡಿಸಲಾಗಿದ್ದು, ಗುತ್ತಿಗೆದಾರರು ಅಕ್ರಮವಾಗಿ ರಶೀದಿ ಮುದ್ರಿಸಿ ರೂ 50 ವಸೂಲಿ ಮಡುತ್ತಿದ್ದಾರೆ ಎಂದು ಆರೋಪಿಸಿ ರಶೀದಿ ಪ್ರದರ್ಶಿಸಿದರು.

ಇಲ್ಲಿನ ಪುರಸಭೆ ವತಿಯಿಂದಲೇ ಗುತ್ತಿಗೆದಾರನಿಗೆ ವಾಹನ, ಡೀಸೆಲ್ ಸಹಿತ ಹಲವು ಸೌಲಭ್ಯ ಒದಗಿಸಲಾಗಿದ್ದರೂ ಬಿ.ಸಿ.ರೋಡ್-ಗೂಡಿನಬಳಿ ರಸ್ತೆಯುದ್ದಕ್ಕೂ ತ್ಯಾಜ್ಯ ರಾಶಿ ಗಬ್ಬೆದ್ದು ನಾರುತ್ತಿದೆ ಎಂದರು. ಈಗಾಗಲೇ ಮೂರು ಬಾರಿ ಟೆಂಡರ್ ಕರೆದರೂ ಯಾರು ಕೂಡಾ ಟೆಂಡರ್ ವಹಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಮತ್ತು ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಸಭೆಗೆ ತಿಳಿಸಿದರು. ಇದಕ್ಕೆ ಬಿಜೆಪಿ ಸದಸ್ಯ ಎ.ಗೋವಿಂದ ಪ್ರಭು ಮತ್ತಿತರರು ಪ್ರತಿಕ್ರಿಯಿಸಿ, ಎಲ್ಲಾ ವಾರ್ಡುಗಳನ್ನು ಮೂರು ವಿಭಾಗವಾಗಿ ವಿಂಗಡಿಸಿ ಪ್ರತ್ಯೇಕ ಟೆಂಡರ್ ಕರೆಯುವಂತೆ ಸಲಹೆ ನೀಡಿದರು.
ನೀರಿಗೆ ದಂಡ:
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಮದ ನಾಗರಿಕರಿಗೆ ಶುದ್ಧ ಜಲ ಪೂರೈಸದಿರುವ ಪರಿಣಾಮ ಪರಿಸರ ಇಲಾಖೆ ದಂಡ ವಿಧಿಸಿರುವ ಬಗ್ಗೆಯೂ ಸಭೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು.
ಇದಕ್ಕೆ ಆಡಳಿತ ಪಕ್ಷ (ಕಾಂಗ್ರೆಸ್) ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬೂಡ ಅಧ್ಯಕ್ಷ ಸದಾಶಿವ ಬಂಗೇರ, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಮತ್ತಿತರರು ಸಹಮತ ವ್ಯಕ್ತಪಡಿಸಿದರು. ಸದಸ್ಯರಾದ ಪ್ರವೀಣ್ ಬಿ., ಗಂಗಾಧರ್ ಪೂಜಾರಿ, ಜಗದೀಶ ಕುಂದರ್, ಬಿ.ಮೋಹನ್, ಸುಗುಣಾ ಕಿಣಿ, ವಸಂತಿ ಚಂದಪ್ಪ, ಯಾಸ್ಮಿನ್, ಚಂಚಲಾಕ್ಷಿ, ಪ್ರಭಾ ಆರ್.ಸಾಲ್ಯಾನ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆ:
ಕಳೆದ ನಾಲ್ಕು ವರ್ಷಗಳ ಬಳಿಕ ಕಾಂಗ್ರೆಸ್ ಆಡಳಿತ ಹೊಂದಿರುವ ಬಂಟ್ವಾಳ ಪುರಸಭೆಯಲ್ಲಿ ಕೊನೆಗೂ ಒಂದು ವರ್ಷದ ಅವಧಿಗೆ ನಿರೀಕ್ಷೆಯಂತೆ ಸ್ಥಾಯಿ ಸಮಿತಿಗೆ ನೂತನ ಅಧ್ಯP್ಷÀರಾಗಿ ಹಿರಿಯ ಸದಸ್ಯ ವಾಸು ಪೂಜಾರಿ ಇವರನ್ನು ಮಂಗಳವಾರ ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು.
ಉಳಿದಂತೆ ಸಮಿತಿಗೆ ಇತರ ಸದಸ್ಯರಾಗಿ ಜಗದೀಶ್ ಕುಂದರ್, ಚಂಚಲಾಕ್ಷಿ, ಪ್ರಭಾ ಆರ್. ಸಾಲಿಯಾನ್(ಕಾಂಗ್ರೆಸ್) ಮೋಹನ್ ಬಿ. (ಜೆಡಿಎಸ್), ಮುನೀಶ್ ಆಲಿ (ಎಸ್‍ಡಿಪಿಐ) ಇವರು ಅವಿರೋಧವಾಗಿ ಆಯ್ಕೆಗೊಂಡರು.
ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್, ಮೊಹಮ್ಮದ್ ನಂದಾವರ, ಮಲ್ಲಿಕಾ ಶೆಟ್ಟಿ ಮತ್ತಿತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

By suddi9

Leave a Reply

Your email address will not be published. Required fields are marked *