ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಘಟಕ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಸಾಲೆತ್ತೂರಿನ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಮಂಚಿ ಕೊಳ್ನಾಡುವಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮತ್ತು ಬಂಟ್ವಾಳ ರೋಟರಿ ಕ್ಲಬ್ ಆಶ್ರಯದಲ್ಲಿ ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಹಿಳಾ ಜಾಗೃತಿ ಸಮಾವೇಶ ನಡೆಯಿತು.
ಇದೇ ಸಂದರ್ಭ ಕುಂಕುಮಾರ್ಚನೆ ಸೇವೆಯೊಂದಿಗೆ ಗ್ರಾಮ ಸುಭಿಕ್ಷಾ ಕಾರ್ಯಕ್ರಮ ಜರಗಿತು. ಒಡಿಯೂರು ಗುರುದೇವದತ್ತ ಸಂಸ್ಥಾನಂನ ಸಾಧ್ವಿ ಶ್ರೀ ಮಾತಾನಂದಮಯೀ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರಕಾಶ್ ಕಾರಂತ ಉದ್ಘಾಟಿಸಿದರು. ಮಹಿಳೆಯರಿಗೆ ಸಮಾಜದಲ್ಲಿರುವ ವಿಶೇಷ ಸ್ಥಾನಮಾನ ಮತ್ತು ಆರ್ಥಿಕ ಸಬಲತೆಯೊಂದಿಗೆ ಜ್ಞಾನದ ಅಭಿವೃದ್ಧಿಗೆ ಯೋಜನೆ ಅವಕಾಶ ಕಲ್ಪಿಸಿದೆ ಎಂದು ಅವರು ಹೇಳಿದರು.ಮುಖ್ಯ ಅತಿಥಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಸುನೀತಾ ನಾಯಕ್ ಯೋಜನೆಯ ಹಾಗೂ ಜನಜಾಗೃತಿ ವೇದಿಕೆ ಮುಖಾಂತರ ನಡೆಯುವ ಇತ್ತೀಚಿನ ಹೊಸ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೊಳ್ನಾಡು ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಸರಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಮಹಿಳೆಯರಿಗೆ ಮುಖ್ಯ ಆದ್ಯತೆಯಿರುವ ಬಗ್ಗೆ ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ ಮಾತನಾಡಿ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ನಡೆಯುವ ಇಂತಹ ಕಾರ್ಯಕ್ರಮಗಳಿಗೆ ರೋಟರಿ ಬೆಂಬಲ ಇದೆ ಎಂದರು.ಅಧ್ಯಕ್ಷತೆ ವಹಿಸಿಕೊಂಡಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಾಗೂ ಜನಜಾಗೃತಿ ವೇದಿಕೆಯ ತಾಲೂಕಿನ ನಿಕಟಪೂರ್ವ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಮಾತನಾಡಿ, ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾಗೂ ಸಾಮಾಜಿಕಅಭಿವೃದ್ಧಿ ಕಾರ್ಯಕ್ರಮಗಳಿಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆಯಿತ್ತರು. ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಸಾಲೆತ್ತೂರು ವಲಯದ ವಲಯಾಧ್ಯಕ್ಷರಾದ ದೇವಿದಾಸ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಮಹಾಬಲ ರೈ, ಸಾಲೆತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಾವತಿ, ಸಾಲೆತ್ತೂರು ವಲಯದ ಒಕ್ಕೂಟಗಳ ವಲಯಾಧ್ಯಕ್ಷರಾದ ರಂಜಿತ್ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಾಲೆತ್ತೂರು ವಲಯದ ಮೇಲ್ವಿಚಾರಕಿ ಮಮತಾ ನಿರೂಪಿಸಿ, ನಿಕಟಪೂರ್ವ ವಲಯಾಧ್ಯಕ್ಷ ಚಂದ್ರಹಾಸ ಸ್ವಾಗತಿಸಿದರು. ಒಕ್ಕೂಟದ ಅಧ್ಯಕ್ಷ ಜಯರಾಮ ಶೇಖ್ ವಂದಿಸಿದರು.
