ಬಂಟ್ವಾಳ: ಕಸ್ಬಾ ಗ್ರಾಮದ ರಥಬೀದಿಯಲ್ಲಿರುವ ಕದ ನಂಬರ್ 8-240 ಕಟ್ಟಡದ ವಿರುದ್ಧ ನೀಡಲಾದ ದೂರಿನ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳವ ನಿರ್ಣಯವನ್ನು ಪುಸ್ತಕದಲ್ಲಿ ದಾಖಲಿಸುವ ಕುರಿತಾಗಿ ಬುಧವಾರ ತಹಶೀಲ್ದಾರರು ನೀಡಿದ ಸೂಚನೆಗೂ ಪುರಸಭಾಡಳಿತ ಮಣೆಹಾಕದ ಹಿನ್ನೆಲೆಯಲ್ಲಿ ವಿಪಕ್ಷ ಬಿಜೆಪಿ ಸದಸ್ಯರು ಗುರುವಾರ ಸಂಜೆಯ ಬಳಿಕ ಅಹೋರಾತ್ರಿ ಧರಣಿ ಕುಳಿತಿದ್ದಾರೆ.
ಮಧ್ಯಾಹ್ನದ ವೇಳೆ ಸದಸ್ಯ ದೇವದಾಸ್ ಶೆಟ್ಟಿ ಅವರು ಸೆ. 4ರಂದು ನಡೆದ ಸಾಮಾನ್ಯ ಸಭೆಯ ನಿರ್ಣಯ ಪ್ರತಿ ಕೇಳಲು ಬಂದಾಗ ವಿವಾದಿತ ಕಟ್ಟಡಕ್ಕೆ ಸಂಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕುರಿತ ನಿರ್ಣಯವನ್ನು ದಾಖಲಿಸಿರಲಿಲ್ಲ. ಈ ಬಗ್ಗೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಅವರು ಅಸ್ಪಷ್ಟ ಉತ್ತರ ನೀಡಿದ್ದು, ಅಧ್ಯಕ್ಷರಲ್ಲಿಯೇ ಮಾತುಕತೆ ನಡೆಸುವಂತೆ ತಿಳಿಸಿದ್ದರು. ಆದರೆ ಸೆ.4ರಂದು ಸಾಮಾನ್ಯ ಸಭೆಯಲ್ಲಿ ಕಟ್ಟಡದ ಬಗ್ಗೆ ಕಾನೂನು ಕ್ರಮಕೈಗೊಳ್ಳುವ ಕುರಿತ ನಿರ್ಣಯವನ್ನು ಮಾತ್ರ ಎಂದು ಸದಸ್ಯ ದೇವದಾಸ್ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೂರುದಾರ, ಸದಸ್ಯ ದೇವದಾಸ ಶೆಟ್ಟಿ ಅವರೊಂದಿಗೆಇತರ ಸದಸ್ಯರಾದ ಗೋವಿಂದ ಪ್ರಭು, ಸುಗುಣ ಕಿಣಿ, ಭಾಸ್ಕರ್ ಟೈಲರ್‍ರವರು ಧರಣಿ ಕುಳಿತರು.

21 banwal purasabe (3)
ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಪ್ರಮುಖರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಜಿ.ಆನಂದ, ರಾಮದಾಸ್ ಬಂಟ್ವಾಳ, ದಿನೇಶ್ ಭಂಡಾರಿ, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ರಮಾನಾಥ ರಾಯಿ, ಸೀತರಾಮ ಪೂಜಾರಿ, ಪ್ರೇಮ್‍ನಾಥ್, ಗಣೇಶ್ ರೈ ಮಾಣಿ, ಮಹಾಬಲ ಶೆಟ್ಟಿ, ಮಚೇಂದ್ರ ಸಾಲ್ಯಾನ್, ರಝಾಕ್, ರಾಜಾರಾಮ್ ನಾಯ್ಕ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಕೂಡಾ ಪುರಸಭಾ ಕಚೇರಿ ವಠಾರದಲ್ಲಿ ಜಮಾಯಿಸಿ ಧರಣಿಗೆ ಸಾಥ್ ನೀಡಿದರು.
ಡಿ.ಸಿ. ಅಗಮನಕ್ಕೆ ಪಟ್ಟು:
ಜಿಲ್ಲಾಧಿಕಾರಿಯವರೇ ಇಲ್ಲಿಗೆ ಆಗಮಿಸಿ ತಮ್ಮ ಅಹವಾಲು ಕೇಳಬೇಕು ಇಲ್ಲವೇ ಮುಂದಿನ ಸಭೆಯಲ್ಲಿ ಈ ನಿರ್ಣಯವನ್ನು ದಾಖಲಿಸುವ ಲಿಖಿತ ಭರವಸೆ ನೀಡಬೇಕು. ಇಲ್ಲದಿದ್ದಲ್ಲಿ ಅನಿರ್ಧಿಷ್ಟಾವಧಿವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಧರಣಿನಿರತ ಸದಸ್ಯರು ತಿಳಿಸಿದ್ದಾರೆ.
ಕಚೇರಿಗೆ ಬೀಗಹಾಕಿ ತೆರಳಿದ ಸಿಒ:
ಸದಸ್ಯರು ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತಿದ್ದಾಗಲೇ ಸಿಬ್ಬಂದಿಗಳು ತಮ್ಮ ಕರ್ತವ್ಯದ ಅವಧಿ ಮುಗಿದ ಬಳಿಕ ಅವರಪಾಡಿಗೆ ಮನೆಯತ್ತ ತೆರಳಿದರೆ, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಅವರು ಕಚೇರಿಯ ಮುಂಭಾಗಕ್ಕೆ ಬೀಗಹಾಕಿ ಎಟೆಂಡರ್ ಒಬ್ಬರನ್ನು ನಿಲ್ಲಿಸಿ ಪ್ರವಾಸಿ ಮಂದಿರದಲ್ಲಿ ಸಚಿವರು ಕರೆದ ಸಭೆಯಲ್ಲಿ ಭಾಗವಹಿಸಲು ನಿರ್ಗಮಿಸಿದರು.
ಇದಕ್ಕೂ ಮೊದಲು ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯ ವಾಸು ಪೂಜಾರಿ ಸೇರಿದಂತೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಅವರು ಸದಸ್ಯರ ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಧರಣಿನಿರತ ಸದಸ್ಯರು ಪಟ್ಟುಸಡಿಲಿಸಲಿಲ್ಲ. ಸುದ್ದಿ ತಿಳಿದ ನಗರ ಠಾಣೆಯ ಎಸ್ಸೈ ರಕ್ಷಿತ್ ಅವರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರಿಂದ ಮಾಹಿತಿ ಪಡೆದುಕೊಂಡು ಸೂಕ್ತ ಬಂದೋಬಸ್ತ್ ಏರ್ಪಡಿಸಿದರು.
ಬುಧವಾರ ಸಂಜೆ ಧರಣಿನಿರತರಾಗಿದ್ದ ಸದಸ್ಯರನ್ನು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಸೆ. 4ರಂದು ಸಾಮಾನ್ಯ ಸಭೆಯಲ್ಲಾದ ನಿರ್ಣಯವನ್ನು ಪುಸ್ತಕದಲ್ಲಿ ದಾಖಲಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನು ಹಿಂತೆಗೆದುಕೊಂಡಿದ್ದರು. ಆದರೆ ಗುರುವಾರ ಸಭೆಯ ನಿರ್ಣಯಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದರಾದರೂ ವಿವಾದಿತ ಕಟ್ಟಡಕ್ಕೆ ಸಂಬಂಧಿಸಿದ ನಿರ್ಣಯ ಮಾತ್ರ ಉಲ್ಲೇಖವಾಗಿರಲಿಲ್ಲ. ಹಾಗೆಯೇ ಸಹಾಯಕ ಕಮೀಷನರ್ ಅವರ ಸಮ್ಮುಖದಲ್ಲಿ ಅಧ್ಯಕ್ಷರು, ಮುಖ್ಯಾಧಿಕಾರಿ ಸೇರಿದಂತೆ ಸಭೆ ನಡೆಸುವ ಆಶ್ವಾಸನೆಯನ್ನು ತಹಶೀಲ್ದಾರ್ ನೀಡಿದ್ದರು. ಆದರೆ ಈ ಸಭೆಯು ನಡೆಯದೇ ಕೇವಲ ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರೇ ಚರ್ಚಿಸಿ ನಿರ್ಣಯವನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಗುರುವಾರ ಈ ಬಗ್ಗೆ ತಹಶೀಲ್ದಾರ್‍ಗೆ ಫೋನ್ ಕರೆ ಮಾಡಿದಾಗ ಸ್ವೀಕರಿಸದೇ ನಿರ್ಲಕ್ಷಿಸಿದ್ದಾರೆ ಎಂದು ಸದಸ್ಯ ದೇವದಾಸ್ ಶೆಟ್ಟಿ ಆರೋಪಿಸಿದ್ದಾರೆ.

By suddi9

Leave a Reply

Your email address will not be published. Required fields are marked *