ಕೈಕಂಬ: ಗುರುಪುರ ಹೋಬಳಿಯನ್ನು ಮೂಡಬಿದ್ರಿ ತಾಲೂಕಿಗೆ ಸೇರಿಸುವ ಪ್ರಸ್ತಾವಕ್ಕೆ ಗುರುಪುರ ಹೋಬಳಿಯ ಏಳೂ ಗ್ರಾಮ(ಗುರುಪುರ, ಕಂದಾವರ, ಗಂಜಿಮಠ, ಉಳಾಯಿಬೆಟ್ಟು, ನೀರುಮಾರ್ಗ, ಅಡ್ಯಾರು ಮತ್ತು ಮಲ್ಲೂರು) ಪಂಚಾಯತುಗಳಿಂದ ಪಕ್ಷಾತೀತ ವಿರೋಧ ವ್ಯಕ್ತವಾಗಿದ್ದು, ಕಾಂಗ್ರೆಸ್ ಪಕ್ಷವು ಉಗ್ರ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.

“ಮೂಡಬಿದ್ರಿ ತಾಲೂಕು ರಚನೆಗೆ ನಮ್ಮ ಪೂರ್ಣ ಬೆಂಬಲವಿದೆ. ಆದರೆ ಅದು ಹಿಂದಿನ ಸಮೀಕ್ಷೆಯ ಪ್ರಕಾರವೇ ನಡೆಯಬೇಕು. ಹಿಂದಿನ ಸಮೀಕ್ಷೆಯಲ್ಲಿ ಗುರುಪುರ ಹೋಬಳಿ ಸೇರಿರಲಿಲ್ಲ. ಆದರೆ ಅಧಿಕಾರಿಗಳು ಈಗ ಏಕಾಏಕಿಯಾಗಿ ಹಿಂದಿನ ಪ್ರಸ್ತಾವದಲ್ಲಿದ್ದ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮ ಕೈಬಿಟ್ಟು ಗುರುಪುರ ಹೋಬಳಿ ಸೇರಿಸಿರುವುದು ಖಂಡನೀಯ” ಎಂದು ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಟೀಕಿಸಿದರು.

“ಜನಮತವಿಲ್ಲದ ಪ್ರಸಕ್ತ ಪ್ರಸ್ತಾವಕ್ಕೆ ನಮ್ಮ ತೀವ್ರ ವಿರೋಧವಿದ್ದು, ಬ್ಲಾಕ್ ಮತ್ತು ಗ್ರಾಮ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದವರು, “ಅರ್ಕುಲ ಅಥವಾ ಅಡ್ಯಾರಿನಂತಹ ಪ್ರದೇಶಗಳ ಮಂದಿಗೆ ಮೂಡಬಿದ್ರಿಗೆ ತೆರಳಲು ಎಷ್ಟು ಕಷ್ಟವಿದೆ ಎಂಬುದನ್ನು ಜಿಲ್ಲಾಡಳಿತ ಅರ್ಥೈಸಿಕೊಳ್ಳಬೇಕು ಮತ್ತು ಇದು ನ್ಯಾಯ ಸಮ್ಮತ ಪ್ರಸ್ತಾವವಲ್ಲ” ಎಂದರು.

ಹಿಂದಿನ ಪ್ರಸ್ತಾವ ಸರಿಯಾಗಿತ್ತು. ಆದರೆ ಈಗ ಎಲ್ಲಿಂದಲೋ ಬಂದಿರುವ ಅಧಿಕಾರಿಗಳು ಎಲ್ಲೋ ಕುಳಿತುಕೊಂಡು, ಭೌಗೋಳಿಕ ಹಿನ್ನೆಲೆ ಗಮನದಲ್ಲಿಟ್ಟುಕೊಳ್ಳದೆ ಕೈಗೊಂಡಿರುವ ಸಮೀಕ್ಷೆ ಮತ್ತು ಪ್ರಸ್ತಾವ ನ್ಯಾಯ ಸಮ್ಮತವಾಗಿಲ್ಲ. ಗುರುಪುರ ಹೋಬಳಿ ಹಿಂದೆಯೂ ಮುಂದೆಯೂ ಮಂಗಳೂರು ತಾಲೂಕು ವ್ಯಾಪ್ತಿಯಲ್ಲೇ ಇರುತ್ತದೆ. ತಪ್ಪಿದಲ್ಲಿ ಕಾಂಗ್ರೆಸ್ಸಿನಿಂದ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಜಿ ಪಂ ಸದಸ್ಯ(ಗುರುಪುರ) ಯು ಪಿ ಇಬ್ರಾಹಿಂ ಎಚ್ಚರಿಸಿದರು.

“ಮೂಡಬಿದ್ರಿ ಎಲ್ಲಿದೆ ಮತ್ತು ಅಡ್ಯಾರು, ಅರ್ಕುಲ ಎಲ್ಲಿದೆ ? ಗುರುಪುರ ಹೋಬಳಿಯನ್ನು ಮೂಡಬಿದ್ರಿ ತಾಲೂಕಿಗೆ ಸೇರಿಸಿರುವುದು ಅವೈಜ್ಞಾನಿಕ ಮತ್ತು ಅಸಂವಿಧಾನಿಕ. ಈ ಪ್ರಸ್ತಾವಕ್ಕೆ ಬಿಜೆಪಿಯ ವಿರೋಧ ಇದೆ” ಎಂದು ಮಂಗಳೂರು ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

“ಮಂಗಳೂರು ಹೋಬಳಿಯನ್ನು ಮೂಡಬಿದ್ರೆ ತಾಲೂಕಿಗೆ ಸೇರಿಸುವ ಪ್ರಸ್ತಾವಕ್ಕೆ ನನ್ನ ವಿರೋಧವಿದೆ. ಗಂಜಿಮಠ, ಎಡಪದವು, ಕುಪ್ಪೆಪದವು ಗ್ರಾಮಗಳನ್ನು ಮೂಡಬಿದ್ರೆಗೆ ಸೇರಿಸಿದರೆ ಆ ಭಾಗದವರಿಗೆ ಅನುಕೂಲವಾಗಬಹುದು. ಆದರೆ ಮಂಗಳೂರಿಗೆ ಸೇರಿರುವ ದೂರದ ಅಡ್ಯಾರು, ಅರ್ಕುಲ, ನೀರುಮಾರ್ಗ ಮೊದಲಾದ ಪ್ರದೇಶಗಳನ್ನು ಮೂಡಬಿದ್ರಿಗೆ ಸೇರಿಸುವುದು ಸಮಂಜಸವಲ್ಲ. ಪ್ರಸಕ್ತ ಪ್ರಸ್ತಾವ ಕೈಬಿಡದಿದ್ದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ” ಎಂದು ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅಭಿಪ್ರಾಯಪಟ್ಟರು.

“ಗುರುಪುರ ಹೋಬಳಿಯನ್ನು ಮಂಗಳೂರು ತಾಲೂಕಿನಲ್ಲೇ ಉಳಿಸಿಕೊಳ್ಳಲು ನಡೆಸುವ ಸಂವಿಧಾನಾತ್ಮಕ ಯಾವುದೇ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ” ಎಂದು ಕಾಂಗ್ರೆಸ್ ಶಾಸಕ ಮೊಹಿಯುದ್ದೀನ್ ಬಾವ ನುಡಿದರು.

ಜೆಡಿಎಸ್ ವಿರೋಧ :
“ಹೊಸದಾಗಿ ರಚನೆಗೊಳ್ಳಲಿರುವ ಮೂಡಬಿದ್ರೆ ತಾಲೂಕಿಗೆ ಗುರುಪುರ ಹೋಬಳಿ ಸೇರಿಸುವ ಅಗತ್ಯವಿಲ್ಲ. ಈ ಪ್ರಸ್ತಾವದ ವಿರುದ್ಧ ನಮ್ಮ ಪಕ್ಷ ಪ್ರಾಮಾಣಿಕ ಹೋರಾಟ ನಡೆಸಲಿದೆ” ಎಂದು ಜೆಡಿಎಸ್ ಸ್ಥಳೀಯ ಮುಖಂಡ ಸುದರ್ಶನ ಶೆಟ್ಟಿ ಪೆರ್ಮಂಕಿ ಹೇಳಿದರು.

ಉಳಿದಂತೆ ಈ ಪ್ರಸ್ತಾವಕ್ಕೆ ಪಡುಪೆರಾರ ಮಾಜಿ ಅಧ್ಯಕ್ಷ ಪದ್ಮಾನಾಭ ಪೂಜಾರಿ, ಮೆಲ್ವಿನ್ ಡಿಸೋಜ(ಮಾಜಿ ಜಿಂಪ ಸದಸ್ಯ), ಮಾಜಿ ಜಿಪಂ ಸದಸ್ಯ ಜಾನ್ ಡಿ’ಸೋಜ, ತಾಪಂ ಸದಸ್ಯರಾದ ಸಮದ್, ಸಚಿನ್ ಅಡಪ, ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಸದಸ್ಯ ಅಶ್ರಫ್ ಅಡ್ಡೂರು, ಬಿಜೆಪಿ ಸದಸ್ಯ ಶ್ರೀಕರ ಮೊದಲಾದವರು ವಿರೋಧ ವ್ಯಕ್ತಪಡಿಸಿದರು.

By suddi9

Leave a Reply

Your email address will not be published. Required fields are marked *