ವಿಟ್ಲ:ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ನಿವೃತ್ತ ಶಿಕ್ಷಕರಾದ ಸುರೇಶ್ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ ಸಮಾಜದಲ್ಲಿ ಶಿಕ್ಷಕರಿಗೆ ಗೌರವಯುತ ಸ್ಥಾನವನ್ನು ನೀಡಲಾಗಿದೆ. ಶಿಕ್ಷಕರು ಮಾನವ ಸಂಪನ್ಮೂಲವನ್ನು ರೂಪಿಸುವ ಅದ್ಭುತ ಶಿಲ್ಪಿಗಳು” ಎಂದರು. ಸಂಚಾಲಕರಾದ ಜೆ.ಪ್ರಹ್ಲಾದ್ ಶೆಟ್ಟಿಯವರು ಮಾತನಾಡಿ , ಶಿಕ್ಷಕ ವೃತ್ತಿ ತುಂಬಾ ಅಮೂಲ್ಯವಾದುದು. ವಿದ್ಯಾರ್ಥಿಗಳು ತಮ್ಮ ನಡತೆಯ ಮೂಲಕ ಶಿಕ್ಷಕರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕೆ.ಬಾಲಕೃಷ್ಣ ಆಳ್ವರವರು ಮಾತನಾಡಿ “ಶಿಕ್ಷಕರಿಂದ ನಮಗೆ ಅಪೂರ್ವ ಜ್ಞಾನ ದೊರೆಯುತ್ತದೆ. ಅದನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿ ಆದರ್ಶ ವ್ಯಕ್ತಿಗಳಾಗಬೇಕು” ಎಂದರು. ಆಡಳಿತಾಧಿಕಾರಿ ಸಿ. ಶ್ರೀಧರ್ ರವರು ಮಾತನಾಡಿ “ಶಿಕ್ಷಕರು ಭಾವಿ ಪ್ರಜೆಗಳನ್ನು ಆದರ್ಶಯುತವಾಗಿ ರೂಪಿಸುವ ಶಿಲ್ಪಿಗಳು” ಎಂದರು. ಶಾಲಾ ಮುಖ್ಯೋಪಾಧ್ಯಾಯಿನಿಯರಾದ ವಿಜಯಲಕ್ಷ್ಮೀ ವಿ.ಶೆಟ್ಟಿ ಮತ್ತು ಗ್ರೇಸ್ ಪಿ.ಸಲ್ಡಾನ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ.ನಾರಾಯಣ ಶೆಟ್ಟಿಯವರು ಉಪಸ್ಥಿತರಿದ್ದರು.
ಶಿಕ್ಷಕರು ಜ್ಞಾನದ ಸಂಕೇತವಾದ ಹಣತೆಗಳನ್ನು ಹಚ್ಚಿ ಡಾ|| ರಾಧಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಟ ನಮನ ಸಮರ್ಪಿಸಿ ಗೌರವ ಕಾಣಿಕೆ ಸ್ವೀಕರಿಸಿದರು. ಇದೇ ಸಂದರ್ಭ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿಯವರಿಗೆ ಗುರುವಂದನೆ ಸಲ್ಲಿಸಲಾಯಿತು.
ಕ್ರೀಡೆ ಹಾಗೂ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಿಂದ ಮನರಂಜಿಸಿದರು. ವಿದ್ಯಾರ್ಥಿಗಳಾದ ಸೃಷ್ಟಿ ಜಿ.ಎನ್. ಸ್ವಾಗತಿಸಿ, ಆಯುಷ್ ಶೆಟ್ಟಿ ವಂದಿಸಿದರು. ಪ್ರತೀಕ ಹಾಗೂ ಆಶ್ಲೇಷ್ ಕೆ ಕಾರ್ಯಕ್ರಮ ನಿರ್ವಹಿಸಿದರು.


