ಬಂಟ್ವಾಳ : ಪ್ರದಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯ ಮೂಲಕ ಬಂಟ್ವಾಳ ತಾಲೂಕು ಮುಂದಿನ ದಿನಗಳಲ್ಲಿ ಹೊಗೆಮುಕ್ತ ತಾಲೂಕು ಆಗಲಿದೆಯೆಂದು ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಅವರು ಉಳಿ ಗ್ರಾಮದ ಯುವಕ ಮಂಡಲ ಸಭಾ ಭವನದಲ್ಲಿ ಬುಧವಾರ ಉಳಿ ಮತ್ತು ತೆಂಕ ಕಜೆಕಾರು ಗ್ರಾಮ ವ್ಯಾಪ್ತಿಯ 90 ಜನ ಫಲಾನುಭವಿಗಳಿಗೆ ಉಜ್ವಲ ಯೋಜನೆಯ ಮೂಲಕ ಉಚಿತ ಗ್ಯಾಸ್ ಸ್ಟವ್, ಸಿಲಿಂಡರ್ ವಿತರಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಉಜ್ವಲ ಪ್ಲಸ್ ಯೋಜನೆಯಲ್ಲಿ ಮುಂದಿನ ದೀಪಾವಳಿಯೊಳಗೆ ಅನಿಲ ಸಂಪರ್ಕ ದೊರೆಯಲಿದೆ ಎಂದ ಅವರು ದೇಶದ ಮಹಿಳೆಯರ ಉಜ್ವಲ ಭವಿಷ್ಯವನ್ನುಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಯವರು ರೂಪಿಸಿರುವ ಉಚಿತ ಅನಿಲ ಸಂಪರ್ಕವನ್ನು ಮಹಿಳೆಯರು ಸದುಪಯೋಗ ಪಡೆಯಬೇಕು ಎಂದರು. ಕಟ್ಟಿಗೆ ಒಲೆಯಿಂದ ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುವುದರಿಂದ ಬಡವರಿಗೆ ಉಚಿತ ಅನಿಲ ಸಂಪರ್ಕ ಯೋಜನೆ ರೂಪಿಸಲಾಗಿದೆ. ಉಜ್ವಲಯೋಜನೆಯಲ್ಲಿ ಸಿಲಿಂಡರ್ ,ರೆಗ್ಯುಲೇಟರ್,ಸುರಕ್ಷಾ ಪೈಪ್,ಸ್ಟವ್ ಉಚಿತವಾಗಿ ಸಿಗಲಿದೆ ಎಂದರು. ಉಳಿ ಮತ್ತು ತೆಂಕ ಕಜೆಕಾರು ಗ್ರಾಮಗಳನ್ನು ಹೊಗೆಮುಕ್ತ ಗೊಳಿಸುವ ಮಹತ್ತರವಾದ ಜವಾಬ್ದಾರಿ ಗ್ರಾಮ ಪಂಚಾಯತ್ ಸದಸ್ಯರಿಗಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯೋಜನೆಗಳನ್ನು ಮನೆ ಮನೆಗೆ ತ್ವರಿತಗತಿಯಲ್ಲಿ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕೆಂದರು. ಸಂಸದರಾದ ನಳಿನ್ ಕುಮಾರ್ ಕಟೀಲ್ ರವರ ಅವಿರತ ಪರಿಶ್ರಮದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದೆ.ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಮೋದಿಯವರ ಕನಸಿನ ಯೋಜನೆಗಳನ್ನು ತ್ವರಿತಗತಿಯಲ್ಲಿ ನಮ್ಮ ಗ್ರಾಮಗಳಲ್ಲಿ ಸಾಕಾರಗೊಳಿಸುವತ್ತ ಅವಿರತ ಶ್ರಮಿಸೋಣ ಎಂದರು.
ಎ. ಪಿ.ಎಂ ಸಿ.ಸದಸ್ಯ ಹರಿಶ್ಚಂದ್ರ ಪೂಜಾರಿ,ಉಳಿ ಗ್ರಾಮಪಂಚಯತ್ ಉಪಾಧ್ಯಕ್ಷ ಸುರೇಶ್ ಮೈರ ,ಕಾರಿಂಜೇಶ್ವರ ಎಚ್.ಪಿ.ಗ್ಯಾಸ್ ಏಜೆನ್ಸಿ ಯ ಮಾಲೀಕರಾದ ಕರುಣಾಕರ ಶೆಟ್ಟಿ,ಪಂಚಾಯತ್ ಸದಸ್ಯರಾದ ಚಿದಾನಂದ ರೈ ಕಕ್ಕೆಪದವ್, ಚೇತನ್ ಉರ್ದೋಟ್ಟು, ಹರೀಶ್ ಪೂಜಾರಿ ಕಕ್ಕೆಪದವ್ ,ವಸಂತ ರಾಮನಗರ,ಗುಲಾಭಿ ಮಾದೋಡಿ ,ಬಂಟ್ವಾಳ ಬಿ.ಜೆ.ಪಿ ಕಾರ್ಯದರ್ಶಿ ರಮಾನಾಥ ರಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಾಜ್ ಕಮಲ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
