ಮಂಗಳೂರು:ಮಂಗಳೂರಿನಲ್ಲಿ ಮುಂದಿನ ವರ್ಷದೊಳಗೆ ಹಜ್ ಭವನ ನಿರ್ಮಾಣ ಮಾಡಲಾಗುವುದು ಎಂದು ಹಜ್ ಮತ್ತು ನಗರಾಭಿವೃದ್ಧಿ ಸಚಿವ ಆರ. ರೋಶನ್ ಬೇಗ್ ಹೇಳಿದರು. ಬಜ್ಪೆಯ ಅನ್ಸಾರ್ ಸ್ಕೂಲ್ನಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿ ನೇತೃತ್ವದಲ್ಲಿ ಈ ಸಾಲಿನ ಪವಿತ್ರ ಹಜ್ ನಿರ್ವಹಣೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಹಜ್ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಕರಾವಳಿ ಸೇರಿದಂತೆ ಎಲ್ಲೆಡೆ ಗೋರಕ್ಷಣೆಯ ಹೆಸರಿನಲ್ಲಿ ಗಲಭೆಗಳು ಹೆಚ್ಚಿತ್ತಿದೆ. ಹಜ್ ಯಾತ್ರಿಕರು ಗೋರಕ್ಷಕರಿಂದ ರಕ್ಷಣೆ ಪಡೆಯಲು ನಾಡಿನಲ್ಲಿ ಶಾಂತಿ ನೆಮ್ಮದಿಗಾಗಿ ಪ್ರಾರ್ಥಿಸಿರಿ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಆಹ್ಮದ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಉಡುಪಿ, ಚಿಕ್ಕಮಂಗಳೂರು ಸಂಯುಕ್ತಾ ಖಾಝಿ ಅಲ್ಹಾಜ್ ಪಿ. ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಆಶೀರ್ವಚನ ನೀಡಿದರು.

ಶಾಸಕ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಸಚಿವ ಯು. ಟಿ. ಖಾದರ್, ಶಾಸಕ ಐವನ್ ಡಿಸೋಜಾ, ಬಿ. ಎ. ಮೊಯ್ದಿನ್ ಬಾವ, ಜೆ. ಆರ್. ಲೋಬೊ, ಅವಿಭಜಿತ ಜಿಲ್ಲಾ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ. ಎಸ್. ಮಸೂದ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷ ಎಂ. ಎ. ಗಪೂರ್, ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಎಸ್. ಎಂ. ರಶೀದ್, ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ. ವಿ. ರಾವ್, ಹಜ್ ಕ್ಯಾಂಪ್ ಮಂಗಳೂರು ಇದರ ಸಂಯೋಜಕ ವೈ. ಮುಹಮ್ಮದ್ ಕುಂಙ, ಹಜ್ ಸಮಿತಿಯ ವಿಶೇಷಾಧಿಕಾರಿ ಅಬ್ಬಾಸ್ ಶರೀಫ್, ಕೆ. ಎಂ. ಅಬೂಬಕರ್ ಸಿದ್ದೀಕ್ ಮೊಂಟುಗೋಳಿ ಇದ್ದರು.


