ಬಂಟ್ವಾಳ: ನಾವು ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೆ ಕೌಂಟರ್ ಕಾರ್ಯಾಚರಣೆ ಮಾಡುತ್ತಿಲ್ಲ. ರಮಾನಾಥ ರೈ ಅವರ ಒಂದೂವರೆ ತಿಂಗಳ ಬಂಟ್ವಾಳದಲ್ಲಿನ ಕಾರ್ಯಾಚರಣೆಯಿಂದಾಗಿ ವಿಸ್ತಾರಕ ಯೋಜನೆಯನ್ನು ಬಂಟ್ವಾಳಕ್ಕೆ ಸ್ಥಳಾಂತರಿಸಿದ್ದೇವೆ, ರೈ ಅವರು ಬಂಟ್ವಾಳದಿಂದ ತಮ್ಮಷ್ಟಕೆ ಉಚ್ಛಾಟನೆಗೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಬಂಟ್ವಾಳದಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮಾನಾಥ ರೈ ಅವರಿಗೆ ತಾಕತ್ ಇದ್ದರೆ ಬಂಟ್ವಾಳದಿಂದ ಹೊರಗೆ ಹೋಗಿ ಸ್ಪರ್ಧಿಸಲಿ ಎಂದು ಸವಾಲೆಸೆದರು.
ಅರಣ್ಯ ಸಚಿವನಾಗಿ ರಾಜ್ಯದ ಯಾವುದೇ ಭಾಗದಲ್ಲಿ ರೈ ಸಂಚರಿಸಿದ್ದು ನೋಡಿದ್ದೀರ ಎಂದು ಪ್ರಶ್ನಿಸಿದ ಡೀವಿ, ಬೆಂಗಳೂರಿನ ಕ್ಯಾಬಿನೆಟ್ ಮೀಟಿಂಗ್ ಮತ್ತು ಬಂಟ್ವಾಳದ ಐಬಿ ಇಲ್ಲಿ ಮಾತ್ರ ಅವರ ಸಂಚಾರ ನಡೆಯುತ್ತದೆ. ರಮಾನಾಥ ರೈಗೆ ಬೆಂಗಳೂರಿನಿಂದ ಬಂಟ್ವಾಳದವರೆಗೆ ಮಾತ್ರ ಕಾರಿಡಾರ್ ಎಂದು ಲೇವಡಿ ಮಾಡಿದರು.ಹಲವು ಬಾರಿ ಸಿದ್ದರಾಮಯ್ಯ ಕಣ್ಣಿದ್ದು ಕುರುಡರಾಗಿ, ಕಿವಿಯಿದ್ದೂ ಕಿವುಡರಾಗಿ ವರ್ತಿಸುತ್ತಾರೆ. ಬಾಯಿಗೆ ಬೀಗ ಹಾಕಲ್ಲ, ಅವರು ಬಾಯಿಗೆ ಬೀಗ ಹಾಕಿ ಆಡಳಿತ ಮಾಡಿದರೆ ಕರ್ನಾಟಕಕ್ಕೆ ಒಳ್ಳೆಯದಾಗಬಹುದು ಎಂದು ಹೇಳಿದ ಡಿವಿ, ರೈ ದ.ಕ. ಎಸ್ಪಿಗೆ ದಬಾಯಿಸಿದ ವೀಡಿಯೋ ನೋಡಿ ಬಳಿಕ ಸಿದ್ದರಾಮಯ್ಯ ಮಾತನಾಡಲಿ ಎಂದು ಸಲಹೆ ನೀಡಿದರು.
ನಾಚಿಕೆಗೇಡಿನ ಸಂಗತಿ:
ಪರಪ್ಪನ ಅಗ್ರಹಾರ ವಿಚಾರದಲ್ಲಿ ಡಿಐಜಿ ರೂಪಾ ಪತ್ರ ಬರೆದ ವಿಚಾರ ಪ್ರಸ್ತಾಪಿಸಿದ ಡಿವಿಎಸ್, ಇದು ನಾಚಿಕೆಕೇಡಿನ ಸಂಗತಿ ಎಂದರು. ಪರಪ್ಪನ ಅಗ್ರಹಾರದಲ್ಲಿ ಘಟನೆ ನಡೆದರೂ, ಸಿದ್ದರಾಮಯ್ಯನಹುಂಡಿಯಲ್ಲಿ ನಡೆದರೂ ಒಂದೇ ಎಂಬಂತಾಗಿದೆ. ರಾಜ್ಯ ಸರಕಾರವೂ ಇಂಥ ಘಟನೆಯಲ್ಲಿ ಭಾಗಿಯಾಗಿ, ಜನರಿಗೆ ತೊಂದರೆ ಉಂಟಾಗುತ್ತದೆ ಎಂದಾದರೆ ಕೇಂದ್ರ ಹಸ್ತಕ್ಷೇಪ ಮಾಡುತ್ತದೆ ಎಂದು ಹೇಳಿದರು.
ಜಿಗಜಿಣಗಿ ಟೋಲ್ ಪ್ಲಾಜಾ:
ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಟೋಲ್ ಪ್ಲಾಜಾ ವಿಚಾರದ ಕುರಿತು ಮಾತನಾಡಿದ ಡೀವಿ, ತನಿಖೆಗೆ ನಮ್ಮ ಅಭ್ಯಂತರವಿಲ್ಲ. ನಾನು ಜಿಗಜಿಣಗಿ ಅವರ ಬಳಿ ಮಾತನಾಡಿದ್ದೇನೆ. ಸ್ವಾಭಾವಿಕವಾಗಿ ಪತ್ರ ಕೊಟ್ಟಿರುವುದಾಗಿ ಅವರು ಹೇಳಿದ್ದಾರೆ ಎಂದರು.
ಆರೋಪಿಗಳ ಬಂಧನ, ಬಿಡುಗಡೆ:
ಬಿ.ಸಿ.ರೋಡ್ ಗಲಭೆ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನ, ಬಿಡುಗಡೆಯೂ ನಡೆಯುತ್ತಿದೆ. ಪ್ರಮುಖ ಆರೋಪಿಗಳ ಬಂಧನ ನಿನ್ನೆ ಆಗಿದೆ, ಓರ್ವ ತಪ್ಪಿಸಿಕೊಂಡಿದ್ದಾನ ಎಂಬ ಮಾಹಿತಿ ಇತ್ತು. ಯಾರೋ ಎರಡು ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ರಾಜಗೌರವ ಕೊಟ್ಟು ಬಿಡಿಸಿಕೊಂಡು ಹೋಗುವ ಕೆಲಸವೂ ಆಗುತ್ತಿದೆ ಎಂದರು. ಆರ್.ಕೆ.ದತ್ತಾ ಅವರನ್ನು ನಾನು ಸಿ.ಎಂ.ಆಗಿದ್ದಾಗಲಿಂದ ನೋಡಿದೇನೆ. ನಿನ್ನೆ ಬಂಧಿಸಿ ಬಿಡುಗಡೆ ಮಾಡಿದ ಆರೋಪಿಗಳ ಬಗ್ಗೆ ಡಿಜಿಪಿ ಗಂಭೀರ ಹೆಜ್ಜೆ ಇಡಬೇಕು ಎಂದ ಡಿವಿಎಸ್, ನಾನು ಸಿಎಂಗೆ ಯಾವುದೇ ಆಗ್ರಹ ಮಾಡುವುದಿಲ್ಲ, ಯಾಕೆಂದರೆ ಅವರಿಂದ ಯಾವುದೇ ನ್ಯಾಯ ನಿರೀಕ್ಷಿಸಲು ಅಸಾಧ್ಯ ಎಂದರು.ಕೇಂದ್ರ ಸಚಿವನಾಗಿ ಯಾವುದೇ ತನಿಖೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ, ಮೊನ್ನೆ ಡಿಸಿ ಕಚೇರಿಗೆ ಹೋಗುವಾಗ ಶರತ್ ಡೆತ್ ಸರ್ಟಿಫಿಕೇಟ್ ನನ್ನ ಕೈಯಲ್ಲೇ ಇತ್ತು, ಆದರೆ ನಾನು ತನಿಖೆಗೆ ತೊಂದರೆ ಆಗಬಾರದು ಎಂದು ಬಾಹ್ಯವಾಗಿ ಹೇಳಲು ಹೋಗಲಿಲ್ಲ ಎಂದು ಸಚಿವ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್,ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು,ಮಾಜಿ ಶಾಸಕ ರುಕ್ಮಯ ಪೂಜಾರಿ,ಜಿಲ್ಲಾ ಪ್ರ.ಕಾರ್ಯದರ್ಶಿಬ್ರಿಜೇಶ್ ಚೌಟ, ರಾಜ್ಯ ಬಿಜೆಪಿ ಸಹ ವಕ್ತಾರೆ ಸುಲೋಚನಾ ಭಟ್,ಪಕ್ಷದ ಮುಖಂಡರಾದ ರಾಜೇಶ್ ನಾಯ್ಕ್ ಉಳಿಪಾಡಿ,ದೇವದಾಸ ಶೆಟ್ಟಿ,ರಾಮದಾಸ ಬಂಟ್ವಾಳ ,ಜಿ ಆನಂದ ಮೊದಲಾದವರಿದ್ದರು.
