ಕೈಕಂಬ : ಗುರುಪುರ ಗ್ರಾ ಪಂನ 2017-18ರ ಸಾಲಿನ ಪ್ರಥಮ ಗ್ರಾಮಸಭೆ ನಿನ್ನೆ ಅಡ್ಡೂರಿನ ದ ಕ ಜಿ ಪಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾ ಪಂ ಅಧ್ಯಕ್ಷೆ ರುಕಿಯಾ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮೆಸ್ಕಾಂ, ಪೊಲೀಸ್, ಆರೋಗ್ಯ, ಆಹಾರ, ಆಯುಷ್, ಶಿಕ್ಷಣ, ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ಗ್ರಾಮಸ್ಥರ ಅಹವಾಲುಗಳಿಗೆ ಸೂಕ್ತ ಉತ್ತರ ನೀಡಿದರೆ, ಕೆಲವು ಬೇಡಿಕೆಗಳ ದಾಖಲಾತಿ ಮಾಡಿಕೊಂಡು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದರು.
ಗ್ರಾ ಪಂ ವ್ಯಾಪ್ತಿಯ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಭರವಸೆ ನೀಡಿ, ಗ್ರಾ ಪಂ ವ್ಯಾಪ್ತಿಯ ಯೋಜನೆಗಳ ಬಗ್ಗೆ ನಾಗರಿಕರಿಗೆ ಸ್ಪಷ್ಟ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾ ಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ತಾ ಪಂ ಸದಸ್ಯ ಸಚಿನ್ ಅಡಪ ಹಾಗೂ ಬಹುತೇಕ ಸದಸ್ಯರು ಉಪಸ್ಥಿತರಿದ್ದರು.
ಗ್ರಾಮ ಸಭೆಗೆ ನೋಡೆಲ್ ಅಧಿಕಾರಿಯಾಗಿ ನೇಮಕಗೊಂಡಿದ್ದ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಮಂಗಳೂರು ಉತ್ತರ ಇವರು ಇಂದಿನ ಸಭೆಗೆ ಗೈರಾದ ಹಿನ್ನೆಲೆಯಲ್ಲಿ, ಸದ್ರಿ ಅಧಿಕಾರಿಯ ಬೇಜವಾಬ್ದಾರಿ ಖಂಡಿಸಿದ ಗ್ರಾಮಸ್ಥರು ಗ್ರಾಮಸಭೆ ರದ್ದುಗೊಳಿಸಲು ಪಟ್ಟು ಹಿಡಿದರು. ಕೆಲವರು ಅಧಿಕಾರಿ ವಿರುದ್ಧ ವಾಚಾಮಗೋಚರ ಟೀಕಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪಿಡಿಒ ಅಬೂಬಕ್ಕರ್ ಮತ್ತು ಗ್ರಾ ಪಂ ಉಪಾಧ್ಯಕ್ಷ ಉದಯ ಭಟ್ ಗ್ರಾಮಸ್ಥರ ಮನವೊಲಿಸಿ, ಸಭೆ ಯಶಸ್ವಿಯಾಗಿ ನಡೆಯವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
