ಬಂಟ್ವಾಳ: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಹತ್ಯೆಗೊಳಗಾದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿದರು. ಸಜ್ಜನ,ಅಮಾಯಕ ಅರ್ ಎಸ್ ಎಸ್ ಕಾರ್ಯಕರ್ತ ಶರತ್ ಕೊಲೆ ಖಂಡನೀಯವಾಗಿದ್ದು, ಶರತ್ ಹತ್ಯೆ ಹಿಂದೆ ಕಾಣದ ಕೈಗಳ ಕೈವಾಡವಿದ್ದು, ಆಡಳಿತ ಸೂತ್ರ ಹಿಡಿದವರಿಂದ ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆಯುತ್ತಿದೆ ಎಂದು ಸಚಿವ ಡಿ ವಿ ಸದಾನಂದ ಗೌಡ ಅವರು ಆರೋಪಿಸಿದ್ದಾರೆ. ಮನೆಗೆ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದು ಕೊಂಡು ದು:ಖದಲ್ಲಿರುವ ಕುಟುಂಬಕ್ಕೆ ಕೇಂದ್ರದ ಸಚಿವನ ನೆಲೆಯಲ್ಲಿ ಸಾಂತ್ವನ ಹೇಳಲು ಬಂದಿದ್ದೆನೆ. ಶರತ್ ಸ್ವಾಭಿಮಾನಿ ಹಾಗೂ ಶ್ರಮಜೀವಿಯಾದ್ದ, ಒಬ್ಬ ಶರತ್ ಕೊಲೆ ಅಗಿದ್ದರೂ ಅಂತಹ ನೂರಾರು ಶರತ್ ಹುಟ್ಟಿ ಬಂದು ದುಷ್ಕರ್ಮಿಗಳಿಗೆ ಪಾಠ ಕಲಿಸಲಿದ್ದಾರೆ ಎಂದ ಸಚಿವ ಡಿವಿಎಸ್ ಜಿಲ್ಲೆಯಲ್ಲಿ ನಡೆಯುವ ಅಹಿತಕರ ಘಟನೆಗೆ ಯಾರು ತುಪ್ಪ ಸುರಿಯುತ್ತಿದ್ದಾರೆ ಎಂಬುದು ಶೀಘ್ರ ಬಹಿರಂಗವಾಗಲಿದೆ ಎಂದರು. ಇದೇ ವೇಳೆ ಸಚಿವ ಡಿ.ವಿ.ಸದಾನಂದ ಗೌಡರು ವೈಯುಕ್ತಿಕ ನೆಲೆಯಲ್ಲಿ 50 ಸಾವಿರ ರೂಪಾಯಿಗಳನ್ನು ಶರತ್ ತಂದೆಗೆ ನೆರವಿನ ರೂಪದಲ್ಲಿ ನೀಡಿದರು. ಈ ಸಂದರ್ಭ ಕಾರ್ಕಳ ಶಾಸಕ ಸುನೀಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಎಂ ಎಲ್ ಸಿ.ಗಣೇಶ್ ಕಾರ್ಣಿಕ್, ಮಾಜಿ ಶಾಸಕರಾದ ಯೋಗೀಶ್ ಭಟ್, ರುಕ್ಮಯ ಪೂಜಾರಿ, ಮೋನಪ್ಪ ಭಂಡಾರಿ, ಮುಖಂಡರಾದ ರಾಜೇಶ್ ನಾಯ್ಕ್,ದೇವದಾಸ ಶೆಟ್ಟಿ,ಜಿ.ಆನಂದ,ಆಶೋಕ ರೈ ಕೋಡಿಂಬಾಡಿ, ಉದಯಕುಮಾರ್ ಶೆಟ್ಟಿ ಉಡುಪಿ, ಗೋವಿಂದ ಪ್ರಭು, ದಿನೇಶ ಭಂಡಾರಿ, ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ಅಬ್ದುಲ್ ರಜಾಕ್,ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ರಾಜಾರಾಮ್, ರಂಜನ್ ಗೌಡ ಮೊದಲಾದವರಿದ್ದರು.
ನಮ್ಮದೇನಿದ್ದರೂ ಫಾಸಿಟಿವ್ ಪೊಲಿಟಿಕ್ಸ್…
ಕೀಳುಮಟ್ಟದ ರಾಜಕೀಯವನ್ನು ನಾನೆಂದೂ ಮಾಡಲಾರೆ, ನಮ್ಮದೇನಿದ್ದರೂ ಫಾಸಿಟಿವ್ ಪೊಲಿಟಿಕ್ಸ್, ಅಭಿವೃದ್ಧಿ ಪರವಾದ ಚಿಂತನೆ ಎಂದು ಬಂಟ್ವಾಳ ವಿಧಾಣಸಭಾ ಕ್ಷೇತ್ರದ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ತಿಳಿಸಿದ್ದಾರೆ,
ಶರತ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯ ಕಾಲದಲ್ಲಿ ತಾನು ವಿದ್ಯಾರ್ಥಿಯಾಗಿದ್ದೆ. ಅಂದು ಕೂಡ ಇಂತಹ ದುಃಸ್ಥಿತಿ ಇರಲಿಲ್ಲ. ಆದರೆ ಪ್ರಸ್ತುತ ದಿನಗಳಲ್ಲಿ ರಾಜಕಾರಣಿಗಳು ರಾಜಕೀಯ ಬೆಳೆಸುವುದು ಹಾಗೂ ಆಡಳಿತ ವ್ಯವಸ್ಥೆಯೂ ಕೂಡ ದುರುಪಯೋಗವಾಗುತ್ತಿದೆ ಎಂದವರು ಖೇದ ವ್ಯಕ್ತ ಪಡಿಸಿದರು. ಬಂಟ್ವಾಳದಲ್ಲಿ ಅಹಿತಕರ ಘಟನೆಗೆ ಕಾರಣ ಕರ್ತರಾದವರನ್ನು ಬಂಧಿಸುವಂತೆ ಮುಖ್ಯಮಂತ್ರಿ, ಸಚಿವರಾದಿಯಾಗಿ ಪೊಲೀಸ್ ಅಧಿಕಾರಿಯವರಿಗೆ ಆದೇಶಿಸುತ್ತಾರೆ. ಶರತ್ ಕೊಲೆ ಪ್ರಕರಣದ ಆರೋಪಿಗಳನ್ನು ಮಾತ್ರ ಪತ್ತೆ ಹಚ್ಚಿ, ಬಂಧನಕ್ಕೆ ಒಳಪಡಿಸಿ ಎಂದು ಯಾರೊಬ್ಬರೂ ಕೂಡ ಹೇಳುತ್ತಿಲ್ಲ ಎಂದರು.
ಸಹೋದರಿಯರ ಅಳಲು..
ಪ್ರತಿದಿನ ಬೆಳಗಿನ ಜಾವ ಹಾಲುಕರೆದು ನಮ್ಮನ್ನೆಲ್ಲಾ ಎಬ್ಬಿಸುತ್ತಿದ್ದ, ಅಮ್ಮನಿಗೆ ಹಾಲು ಕರೆಯಲು ಆಗುವುದಿಲ್ಲ. ಆದರೂ ದನವನ್ನು ಮಾರಲು ಬಿಟ್ಟಿಲ್ಲ. ಈಗ ಹಾಲಕರೆಯುವಾಗ ನಮ್ಮ ತಮ್ಮನೇ ನೆನಪಾಗುತ್ತಾನೆ ಎಂದು ಶರತ್ ನ ಇಬ್ಬರು ಸಹೋದರಿಯರು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಶರತ್ ಮನೆಗೆ ಭೇಟಿ ನೀಡಿದ ವೇಳೆ ತಂದೆ ತನಿಯಪ್ಪ ಅವರ ಮುಂದೆಯೇ ತಮ್ಮ ದುಃಖವನ್ನು ಹೇಳಿ ಕಣ್ಣೀರಿಟ್ಟರು.
ನಮ್ಮ ತಮ್ಮ ಯಾರಿಗೂ ಯಾರಿಗೂ ಅನ್ಯಾಯ ಮಾಡಿದವನಲ್ಲ, ಯಾರಲ್ಲೂ ದ್ವೇಷ ಕಟ್ಟಿಕೊಂಡವನಲ್ಲ. ಆದರೂ ನಮ್ಮ ತಮ್ಮನನ್ನು ಕಡಿದುಕೊಂದದ್ದಾರೂ ಯಾಕೆ..? ನಮ್ಮ ತಮ್ಮ ಮರಳಿ ಬರುತ್ತಾನೆಯೇ..? ಹಣಕೊಟ್ಟರೆ ಸಿಗುತ್ತಾನೆಯೇ..? ಅಂಗಡಿಯಲ್ಲಿ ಕಡಿದುಹಾಕಿ ಬಿದ್ದವನ ಮೇಲೆ ಹೊಡೆದಿದ್ದಾರೆ. ಇದರಿಂದ ಅವರಿಗೇನು ಲಾಭ, ಮಂಗಳವಾರ ಬೆಳಿಗ್ಗೆಯಷ್ಟೇ ರಕ್ತ ಸಿಕ್ತ ಅಂಗಡಿಯನ್ನು ಸ್ವಚ್ಛ ಮಾಡಿ ಬಂದಿದ್ದೇವೆ ಎಂದು ಸಚಿವ ಡಿ ವಿ.ಮುಂದೆ ಶರತ್ ಸೋದರಿಯರು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
