ಬಂಟ್ವಾಳ:ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಅಮೈ ರಾಜ್ಯ ಕೊಡಮಣಿತ್ತಾಯಿ ಅರಸು ಮುಂಡಿತ್ತಾಯ ಪರಿವಾರ ದೈವ ಮತ್ತು ನಾಗ ಸನ್ನಿಧಿಯಲ್ಲಿ ರೂ 40 ಲಕ್ಷ ವೆಚ್ಚದಲ್ಲಿ ದೈವಸ್ಥಾನ ಪುನರ್ ನಿರ್ಮಾಣಗೊಂಡು ಇದೇ ಏ.30ರಿಂದ ಮೇ.3ರತನಕ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವವು ಸಂಭ್ರಮ ಸಡಗರದಿಂದ ನಡೆಯಲಿದೆ. ಇಲ್ಲಿನ ಒಟ್ಟು 62 ಸೆಂಟ್ಸ್ ಜಮೀನಿನಲ್ಲಿ ಈಗಾಗಲೇ ನಾಗಸನ್ನಿಧಿ ನಿರ್ಮಾಣಗೊಂಡಿದ್ದು, ದೈವಸ್ಥಾನ ನಿರ್ಮಾಣ ಕಾಮಗಾರಿ ಕೂಡಾ ಗ್ರಾಮಸ್ಥರು ಮತ್ತು ದಾನಿಗಳ ಸಹಕಾರದಲ್ಲಿ ಬಹುತೇಕ ಪೂರ್ಣಗೊಂಡಿದೆ.
ಮೇ.1ರಂದು ಮಡಂತ್ಯಾರು ಸಮೀಪದ ನಡುಬೊಟ್ಟು ಕ್ಷೇತ್ರದ ಧರ್ಮದರ್ಶಿ ಎನ್.ರವಿ ಇವರ ಮಾರ್ಗದರ್ಶನ ಮತ್ತು ಪುಂಚೋಡಿ ಶ್ರೀಪತಿ ಭಟ್ ಇವರ ಪೌರೋಹಿತ್ಯದಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದೆ. ಮೇ. 1 ಮತ್ತು 2ರಂದು ಬೆಳಿಗ್ಗೆ ಧಾರ್ಮಿಕ ಸಭೆ ಆಯೋಜಿಸಲಾಗಿದ್ದು, ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಅಳದಂಗಡಿ ಅರಮನೆ ಡಾ.ಪದ್ಮಪ್ರಸಾದ್ ಅಜಿಲ, ಪಡ್ಯಾರಬೆಟ್ಟು ಕ್ಷೇತ್ರದ ಆಡಳಿತ ಮೊಕ್ತೇಸರ ಜೀವಂಧರ ಕುಮಾರ್ ಮತ್ತಿತರ ಗಣ್ಯರು ಭಾಗವಹಿಸುವರು.
ಮೇ.3ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ಇಲ್ಲಿನ ದೈವಗಳ ನೇಮೋತ್ಸವ ನಡೆಯಲಿದ್ದು, ಪ್ರತಿದಿನ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಬ್ರಹ್ಮಕಲಶೋತ್ಸವದ ಯಶಸ್ವಿಯಾಗಿ ಈಗಾಗಲೇ ವಿವಿಧ ಸಮಿತಿ ಮತ್ತು ಉಪಸಮಿತಿ ರಚಿಸಲಾಗಿದೆ.
ಹೊರೆಕಾಣಿಕೆ:
ಇದೇ 30ರಂದು ಬೆಳಿಗ್ಗೆ ಸೋರ್ಣಾಡು ಬಂಡಸಾಲೆ ಸಮೀಪದ ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಬಾಲೇಶ್ವರ ಗರಡಿ ಮತ್ತು ಕೇಲ್ದೋಡಿ ಕ್ಷೇತ್ರ ಮೂಲಕ ಸಾಗುವ ಆಕರ್ಷಕ ಹೊರೆಕಾಣಿಕೆ ಮೆರವಣಿಗೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಚಾಲನೆ ನೀಡುವರು ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ದೇವಪ್ಪ ಕುಲಾಲ್ ತಿಳಿಸಿದ್ದಾರೆ.
