ವಿಟ್ಲ: ವಿಟ್ಲದ ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ ಅಬ್ದುಲ್ ಜಲೀಲ್ ಕರೋಪಾಡಿ ಅವರ ಹತ್ಯೆ ನಡೆದ ಸ್ಥಳದ ಸಮೀಪ ಎರಡು ತಲವಾರ್, ಬಟ್ಟೆಬರೆಗಳು, ಎರಡು ಬೈಕ್ಗಳು ಕರೋಪಾಡಿ ಗ್ರಾಮದ ಮುಗುಳಿ ಸಮೀಪದ ಪೊದೆಯೊಂದರಲ್ಲಿ ಪತ್ತೆಯಾಗಿದ್ದು, ಪ್ರಕರಣದ ತನಿಖೆಯ ದಾರಿ ತಪ್ಪಿಸಲು ಹಂತಕರ ತಂಡ ಈ ರೀತಿಯ ತಂತ್ರ ರೂಪಿಸಿರುವ ಬಗ್ಗೆ ಸ್ಫೋಟಕ ಮಾಹಿತಿ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.
ಕರ್ನಾಟಕ-ಕೇರಳ ಗಡಿಭಾಗದ ಮುಗುಳಿ ಎಂಬಲ್ಲಿಯ ಉಪ್ಪಳ ರಸ್ತೆ ಬದಿಯಲ್ಲಿ ಸ್ಥಳೀಯರು ನಡೆದು ಹೋಗುತ್ತಿದ್ದ ವೇಳೆ ಹಳೆಯ ಎರಡು ಪಲ್ಸರ್ ಕಂಪೆನಿಯ ಬೈಕ್ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೈಕ್ ಪಕ್ಕದಲ್ಲಿ ಎರಡು ತಲವಾರ್, ಹಾಗೂ ಕೆಲವು ಪ್ಯಾಂಟ್ ಹಾಗೂ ಶರ್ಟ್ಗಳು ಪತ್ತೆಯಾಗಿದೆ. ಇದರಿಂದ ಆತಂಕಕ್ಕೀಡಾದ ಪೊಲೀಸರು ಜಲೀಲ್ ಅವರ ಕೊಲೆಗೆ ಸಂಬಂಧಿಸಿದ ವಸ್ತುಗಳೇ ಅಥವಾ ಬೇರೆ ಯಾರದರೂ ತಂದು ಎಸೆದಿರುವ ವಸ್ತುಗಳೇ ಎಂದು ಶಂಕೆ ವ್ಯಕ್ತಪಡಿಸಿದ್ದರು. ಪೊಲೀಸರು ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.
ಜಲೀಲ್ ಅವರ ಹತ್ಯೆ ನಡೆಸಲು ಆರೋಪಿಗಳು ಹೊಸ ಎಫ್ಝಡ್ ಹಾಗೂ ಕಪ್ಪು ಬಣ್ಣದ ಪಲ್ಸರ್ ಬೈಕಿನಲ್ಲಿ ಬಂದಿರುವುದಾಗಿ ಘಟನೆ ನಡೆದ ದಿನ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇಲ್ಲಿ ಹಳೆಯ ಎರಡು ಪಲ್ಸರ್ ಬೈಕ್ ಪತ್ತೆಯಾಗಿದೆ. ಅದಲ್ಲದೇ ಇಲ್ಲಿ ದೊರೆತ ತಲವಾರ್ನಲ್ಲಿ ಯಾವುದೇ ರಕ್ತದ ಕಳೆಗಳು ಇಲ್ಲ. ಒಂದೇ ಸ್ಥಳದಲ್ಲಿ ಎರಡು ಬೈಕ್ಗಳು ಪತ್ತೆಯಾಗಲು ಕಾಣವೇನು?. ಇಲ್ಲಿ ಪತ್ತೆಯಾದ ಎರಡು ಬೈಕ್ಗಳ ಪೈಕಿ ಒಂದು ಬೈಕ್ ಕನ್ಯಾನ ನಿವಾಸಿಯೊಬ್ಬರಿಗೆ ಸೇರಿದಾಗಿದ್ದು, ಅದು ಕೆಟ್ಟು ಹೋಗಿದ್ದ ಸ್ಟಾರ್ಟ್ ಆಗದ ಪರಿಣಾಮ ಕನ್ಯಾನ ಸಾರ್ವಜನಿಕರ ಶೌಚಾಲಯ ಸಮೀಪ ನಿಲ್ಲಿಸಿದ್ದರು. ಇದೀಗ ಈ ಬೈಕ್ ಮುಗುಳಿಯಲ್ಲಿ ಪತ್ತೆಯಾಗಿದೆ. ಈ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಿದಾಗ ಜಲೀಲ್ ಕೊಲೆ ಪ್ರಕರಣದ ದಾರಿ ತಪ್ಪಿಸಲು ಹಂತಕರು ಹೂಡಿರುವ ತಂತ್ರಗಳ ಬಗ್ಗೆ ಬೆಳಕಿಗೆ ಬಂದಿದೆ.
ಈ ಪ್ರಕರಣದ ಹಿಂದೆ ದೊಡ್ಡ ವ್ಯಕ್ತಿಗಳು ಶಾಮೀಳಾಗಿರುವ ಸಾಧ್ಯಗಳಿದ್ದು, ಇದರಿಂದಾಗಿ ತನಿಖೆಯ ಹಾದಿ ತಪ್ಪಿಸಲು ಹಂತಕರು ದಿನೇ ದಿನೇ ವಿವಿಧ ತಂತ್ರಗಳನ್ನು ಉಪಯೋಗಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಇದೀಗ ಇಲ್ಲಿ ದೊರೆತ್ತಿರುವ ವಸ್ತುಗಳಿಗೂ ಜಲೀಲ್ ಕೊಲೆಗೆ ಬಳಕೆ ಮಾಡಿದ ವಸ್ತುಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಅನಾಥ ವಸ್ತುಗಳು ಪತ್ತೆ ಎಂದುದಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
