ಬಂಟ್ವಾಳ:ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೀಸಲಿಟ್ಟ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಲು ಹೋಗಿದ್ದ ಕಂದಾಯ ಇಲಾಖೆ ಗ್ರಾಮ ಕರಣಿಕರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.ಬಂಧಿತರನ್ನು ಸ್ಥಳೀಯ ಉದ್ದೊಟ್ಟು ನಿವಾಸಿ ಅಬ್ದುಲ್ ರಹಿಮಾನ್ ಮತ್ತು ಕುಚ್ಚುಗುಡ್ಡೆ ನಿವಾಸಿ ಅಬ್ದುಲ್ ಹಮೀದ್ ಎಂದು ಗುರುತಿಸಲಾಗಿದ್ದು, ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.21btl-Jcb

ಇಲ್ಲಿನ ಸರ್ಕಾರಿ ಶಾಲೆಗೆ ಸಂಬಂಧಿಸಿದಂತೆ ಮೀಸಲಿಟ್ಟಿರುವ ಒಟ್ಟು 2.08 ಎಕರೆ ಜಮೀನಿನಲ್ಲಿ ಸ್ಥಳೀಯ ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಈ ಜಮೀನಿಗೆ ಸಂಬಂಧಿಸಿದಂತೆ ತುರ್ತು  ಗಡಿ ಗುರುತು ಮಾಡಿಕೊಡುವಂತೆ ಶಾಲೆ ವತಿಯಿಂದ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ. ಈ ನಡುವೆ ಗುರುವಾರ ಮತ್ತೆ ಈ ಆರೋಪಿಗಳು ಜೆಸಿಬಿ ಮೂಲಕ ಒತ್ತುವರಿ ಜಮೀನು ಸಮತಟ್ಟುಗೊಳಿಸುತ್ತಿರುವ ಬಗ್ಗೆ ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ಮಾಹಿತಿ ಬಂದಿದೆ. ಈ ಬಗ್ಗೆ ತಕ್ಷಣವೇ ಅವರು ಜೆಸಿಬಿ ಕಾಮಗಾರಿ ಸ್ಥಗಿತಗೊಳಿಸಿ ಒತ್ತುವರಿ ತೆರವುಗೊಳಿಸುವಂತೆ ಅಲ್ಲಿನ ಗ್ರಾಮಕರಣಿಕ ನವೀನ್ ಟಿ. ಅವರಿಗೆ ಆದೇಶಿಸಿದ್ದಾರೆ. ಇದೇ ವೇಳೆ ಗ್ರಾಮಸಹಾಯಕ ನವೀನ ಎನ್.ಅವರೊಂದಿಗೆ ಬೈಕಿನಲ್ಲಿ ತೆರಳಿದ ಗ್ರಾಮಕರಣಿಕರು ಜೆಸಿಬಿ ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ಇದನ್ನು ಆಕ್ಷೇಪಿಸಿ ಬಂಧಿತ ಆರೋಪಿಗಳಿಬ್ಬರು ಬೈಕಿನ ಕೀಲಿ ಎಳೆದು ಬೈಕ್ ಸಹಿತ ಗ್ರಾಮಕರಣಿಕರನ್ನು ಪಕ್ಕಕ್ಕೆ ತಳ್ಳುವ ಮೂಲಕ ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *