ಮೂಡುಬಿದಿರೆ: ಶಿಕ್ಷಣ ಎಂಬುದು ಬರೇ ಓದುವಿಕೆಯಾಗಿರದೆ ಮನಸ್ಸನ್ನು ಬೆಳೆಸುವುದರ ಜೊತೆಗೆ ಸಂಸ್ಕಾರಯುತವಾದ ಹೃದಯ ಶ್ರೀಮಂತಿಕೆಯನ್ನು ಕಟ್ಟಿಕೊಡುವಂತಾಗಬೇಕು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇಂತಹ ಪ್ರಯತ್ನಗಳಲ್ಲಿ ಸದಾ ಮುಂದಿದ್ದು ಸರ್ಕಾರ ಇದನ್ನು ಮಾದರಿಯಾಆಗಿ ತೆಗೆದುಕೊಂಡು ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.
ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ್ದ ಆಳ್ವಾಸ್ ಸಾಂಪ್ರದಾಯಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿರುವ ಸಂದರ್ಭದಲ್ಲಿ ಆಳ್ವಾಸ್ ಕನ್ನಡ ಶಾಲೆಯಲ್ಲಿ ಪ್ರವೇಶ ಪಡೆಯಲು 14 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಒಳ್ಳೆಯ ವಾತಾವರಣ ರೂಪಿಸಿ, ಸೂಕ್ತ ಅವಕಾಶಗಳನ್ನು ತೆರೆದಿಟ್ಟರೆ ಕನ್ನಡ ಶಾಲೆಗಳು ಹೇಗೆ ಸಾಧನೆ ಮಾಡಬಹುದು ಎಂಬುದಕ್ಕೆ ಆಳ್ವಾಸ್ ಸರಿಯಾದ ಉದಾಹರಣೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ಮಾತನಾಡಿ ನಾವು ಬದುಕಿನ ಯಾವ ಎತ್ತರಕ್ಕೇರಿದರೂ ನಾವು ನಡೆದು ಬಂದ ಹಿನ್ನೆಲೆ, ನಮ್ಮ ಮಣ್ಣಿನ ಅನುಭವ, ಸತ್ವವನ್ನು ಮರೆಯಬಾರದು. ವಿದ್ಯಾರ್ಥಿಗಳು ಮಾಡುತ್ತಿರುವ ಸಾಧನೆ, ವಿವಿಧ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಬೆರೆಯುತ್ತಿರುವುದು ಅವರ್ಣನೀಯ ಸಂತಸವನ್ನು ನೀಡುತ್ತಿದೆ ಎಂದರು.
ಸನ್ಮಾನ: ಈ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು.
ಅದಾನಿ ಯುಪಿಸಿಎಲ್ ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವಾ ಹಾಗೂ ಆಳ್ವಾಸ್ ಕಾಲೇಜಿನ ವಿವಿಧ ವಿಭಾಗಗಳ ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರದರ್ಶನ ಕೊಂಡವು.
ರಂಗೇರಿದ ಆಳ್ವಾಸ್
ಸದಾ ಜ್ಞಾನ-ತಂತ್ರಜ್ಞಾನಗಳ ಚಟುವಟಿಕೆಗಳಿಂದಲೇ ಕೂಡಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‍ನಲ್ಲಿ ನಾನಾ ಪ್ರದೇಶದ ಸಂಪ್ರದಾಯಗಳ ಅನಾವರಣವಾಯಿತು. ದೇಶ, ವಿದೇಶಗಳಿಂದ ಬಂದು ಆಳ್ವಾಸ್‍ನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ನಾಡಿನ ಸಂಪ್ರದಾಯವನ್ನು ಬಣ್ಣದ ಭಿನ್ನವಾದ ಉಡುಗೆ-ತೊಡುಗೆಯಲ್ಲಿ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಅನಾವರಣಗೊಳಿಸಿದರು. ವಿವಿಧ ಸಂಸ್ಕøತಿಗಳನ್ನು ಬಿಂಬಿಸುವ ಸಾಂಸ್ಕøತಿಕ ಪ್ರಕಾರಗಳು ಮೇಳೈಸಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಬ್ಬದ ವಾತಾವರಣ. ಕರಾವಳಿಯ ಹುಲಿವೇಷ, ಉತ್ತರ ಕರ್ನಾಟಕದ ಡೋಲು, ಶ್ರೀಲಂಕನ್ ನೃತ್ಯ ಪ್ರಕಾರ, ಪೂರ್ಣಕುಂಭಗಳೊಂದಿಗೆ ವಿದ್ಯಾರ್ಥಿನಿಯರ ಸಂಚಲನ ಕಾರ್ಯಕ್ರಮಕ್ಕೆ ಮೆರಗು ನೀಡಿತು. ಕ್ಯಾಂಪಸ್ ತುಂಬೆಲ್ಲಾ ದಕ್ಷಿಣ ಭಾರತ, ಕರಾವಳಿ, ಉತ್ತರ ಭಾರತ, ಹೈದರಾಬಾದಿ, ಕೊಡವ, ಈಶಾನ್ಯ ರಾಜ್ಯಗಳ, ವಿದೇಶಿ ತಿನಿಸುಗಳ ಸ್ವಾದ ಮನತಣಿಸಿತು.






