ಬಂಟ್ವಾಳ: ವೀರಕಂಭ ಗ್ರಾಮದ ಸ.ನಂ. 321/2ಪಿಬಿ1-ಪಿ1 ರಲ್ಲಿ 0.75 ಎಕ್ರೆ ಹಾಗೂ 215/3ಪಿ1ರಲ್ಲಿ 0.25 ಎಕ್ರೆಯನ್ನು ಸಾರ್ವಜನಿಕ ಹಿಂದೂ ರುಧ್ರಭೂಮಿಗೆ ಕಾಯ್ದಿರಿಸಿ ಮಂಜೂರಾದ ಜಮೀನನ್ನು ಅಕ್ರಮವಾಗಿ ಮುಸ್ಲಿಂ ದಫನ ಭೂಮಿಯಾಗಿ ದಾಖಲೆ ತಯಾರಿಸಲು ಮುಂದಾಗಿರುವ ಕ್ರಮವನ್ನು ಆಕ್ಷೇಪಿಸಿ ಗ್ರಾಮಸ್ಥರು ದ.ಕ. ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈಗಾಗಲೇ ಕೆಲವು ವ್ಯಕ್ತಿಗಳು ಮಂಜೂರಾದ ಹಿಂದೂ ರುಧ್ರಭೂಮಿಯ ಒಂದು ಅಂಶದ ಭಾಗಕ್ಕೆ ತಂತಿ ಬೇಲಿ ಹಾಕಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆಂದು ಮನವಿಯಲ್ಲಿ ದೂರಲಾಗಿದ್ದು ಈ ಕುರಿತು ಕೂಡಾ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಬಂಟ್ವಾಳ ತಾಲೂಕು ವಿಟ್ಲ ಹೋಬಳಿ ವೀರಕಂಭ ಗ್ರಾಮದಲ್ಲಿ ಹಿಂದುಗಳಿಗೆ ಸೂಕ್ತ ಸ್ಮಶಾನ ಭೂಮಿಯ ವ್ಯವಸ್ಥೆ ಇಲ್ಲದ ಕಾರಣ ಗ್ರಾಮಸ್ಥರ ಮನವಿಯ ವೀರಕಂಭ ಗ್ರಾಮದ ಸ.ನಂ. 321/2ಪಿಬಿ1-ಪಿ1 ರಲ್ಲಿ 0.75 ಎಕ್ರೆ ಹಾಗೂ 215/3ಪಿ1ರಲ್ಲಿ 0.25 ಎಕ್ರೆ ಜಮೀನನ್ನು ಕಾದಿರಿಸಿ ಈ ಸಂಬಂಧ ದಾಖಲೆಗಳನ್ನು ಸಿದ್ಧಪಡಿಸಲಾಗಿತ್ತು. ಬಳಿಕ ಈ ಜಮೀನನ್ನು ಹಿಂದೂ ಭೂಮಿಗೆ ಸಹಾಯಕ ಆಯುಕ್ತರ ಆದೇಶ ಹೊರಡಿಸಿದ್ದರು.
ಸ್ಥಳೀಯ ಕೆಲವೊಂದು ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳು ಮತ್ತು ಪಂಚಾಯತಿನವರು ಶಾಮೀಲಾಗಿ ಹಿಂದೂ ಸ್ಮಶಾನಕ್ಕೆ ಕಾಯಿದ್ದಿರಿಸಲಾದ ಅದೇ ಭೂಮಿಯನ್ನು ಮುಸ್ಲಿಂ ಸ್ಮಶಾನ ಭೂಮಿಯಾಗಿ ಮಂಜೂರು ಮಾಡಲು ಪ್ರಯತ್ನಿಸುತ್ತಿದ್ದು, ಈ ಬಗ್ಗೆ ನಕ್ಷೆಗಳನ್ನು ತಯಾರಿಸಲಾಗಿದೆ ಎಂದು ಮನವಿಯಲ್ಲಿ ದೂರಿರುವ ಗ್ರಾಮಸ್ಥರು ಹಿಂದೂ ರುಧ್ರ ಭೂಮಿಯ ಕೆಲ ಭಾಗಕ್ಕೆ ಅಕ್ರಮವಾಗಿ ತಂತಿ ಬೇಲಿಯನ್ನು ಹಾಕಲಾಗಿದ್ದು ಅದನ್ನು ಸಹ ತೆರವುಗೊಳಿಸಲು ಕ್ರಮ ಕೈಗೊಳ್ಳ ಬೇಕಾಗಿ ವಿನಂತಿಸಿದ್ದಾರೆ.
