ಬಂಟ್ವಾಳ:ತಾಲ್ಲೂಕಿನ ಒಟ್ಟು ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ ಪ್ರಥಮ ಬಾರಿಗೆ ಕಾಮಗಾರಿ ಆರಂಭಗೊಂಡ ಸಂಗಬೆಟ್ಟು ಸಮೀಪದ ಪುಚ್ಚಮೊಗರು ಫಲ್ಗುಣಿ ಹೊಳೆಯಲ್ಲಿ ಪ್ರತೀ ವರ್ಷದಂತೆ ಈ ಬಾರಿ ನೀರಿನ ಮಟ್ಟ ಇಳಿಮುಖವಾಗದೆ ಸ್ಥಿರವಾಗಿದೆ. ಪ್ರತೀ ವರ್ಷ ಏಪ್ರಿಲ್ ಮತ್ತು ಮೇ ತಿಂಗಳು ನದಿಯಲ್ಲಿ ನೀರಿನ ಬದಲಾಗಿ ಕೇವಲ ಮರಳು ಮಾತ್ರ ಕಾಣುತ್ತಿದ್ದು, ಈ ಬಾರಿ ಮಾತ್ರ ಇಲ್ಲಿನ ಕಿರು ಜಲ ವಿದ್ಯುತ್ ಘಟಕದ ಅಣೆಕಟ್ಟೆ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿಯೂ ನೀರಿನ ಮಟ್ಟ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಇಳಿಮುಖವಾಗಿದೆ.

21btl-Puchamogaru

ಬಂಟ್ವಾಳ ಮತ್ತು ಮೂಡುಬಿದ್ರೆ ಗಡಿ ಭಾಗದಲ್ಲಿರುವ ಪುಚ್ಚಮೊಗರು ಸೇತುವೆ ಬಳಿ 1.5ಮೀ. ಎತ್ತರದ ಅಣೆಕಟ್ಟೆಯಿಂದ ಕಳೆದ ಹಲವು ವರ್ಷಗಳಿಂದ ಮೂಡುಬಿದ್ರೆ ಪುರಸಭೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಇನ್ನೊಂದೆಡೆ ಬಂಟ್ವಾಳ ನೇತ್ರಾವತಿ ನದಿಗೆ ತುಂಬೆ ಅಣೆಕಟ್ಟೆ ಮೂಲಕ ಮಂಗಳೂರು ಮಹಾನಗರಪಾಲಿಕೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದರೂ ಬಂಟ್ವಾಳ ಪುರಸಭೆ ಹೊರತು ಪಡಿಸಿ ಇತರ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿಗೆ ಮಾತ್ರ ಬರ ಏಕೆ…? ಎಂಬ ಪ್ರಶ್ನೆ ನಾಗರಿಕರಿಂದ ವ್ಯಕ್ತವಾಗಿತ್ತು.

ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಕಳೆದ ವರ್ಷ ಫಲ್ಗುಣಿ ಹೊಳೆಗೆ ಪುಚ್ಚಮೊಗರು ಮತ್ತು ನೇತ್ರಾವತಿ ನದಿಗೆ ಕರೋಪಾಡಿ ಎಂಬಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಪೈಕಿ ಕರೋಪಾಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ರೂ 36 ಕೋಟಿ ವೆಚ್ಚದ ಪುಚ್ಚಮೊಗರು ಕಾಮಗಾರಿ ಕೂಡಾ ಅಂತಿಮ ಹಂತದಲ್ಲಿದೆ.ಈಗಾಗಲೇ ಫಲ್ಗುಣಿ ಹೊಳೆಯಲ್ಲಿ ಜ್ಯಾಕ್‍ವೆಲ್ ಮತ್ತು ಇಂಟೆಕ್‍ವೆಲ್ ರಚಿಸಲಾಗಿದ್ದು, ಮೇಲ್ಭಾಗದಲ್ಲಿ ಎತ್ತರದ ಸರ್ಕಾರಿ ಜಮೀನಿನಲ್ಲಿ ಮೂರು ಹಂತದ ಶುದ್ಧೀಕರಣ ಘಟಕ ನಿರ್ಮಾಣಗೊಂಡು ವಿದ್ಯುತ್ ಸಂಪರ್ಕ ಮತ್ತು ಪಂಪ್ ಮತ್ತಿತರ ಯಂತ್ರೋಪಕರಣ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೊಂದೆಡೆ ಸಿದ್ಧಕಟ್ಟೆಯಲ್ಲಿ 4.5ಲಕ್ಷ ಲೀ., ಪಂಜಿಕಲ್ಲು ಎಂಬಲ್ಲಿ 5.5ಲಕ್ಷ ಲೀ. ಸಾಮಥ್ರ್ಯ ಹೊಂದಿರುವ ಎತ್ತರದ ಟ್ಯಾಂಕ್, ಅಣ್ಣಳಿಕೆ ಎಂಬಲ್ಲಿ 4.5ಲಕ್ಷ ಲೀ. ಮತ್ತು ಕುರಿಯಾಳ ಎಂಬಲ್ಲಿ 50ಸಾವಿರ ಲೀ.ಸಾಮಥ್ರ್ಯದ ಭೂಗತ ಟ್ಯಾಂಕ್ (ಸಂಪ್) ನಿರ್ಮಾಣಗೊಂಡಿದೆ. ಈ ನಡುವೆ ಬೆಂಜನಪದವು ಎಂಬಲ್ಲಿ ಕೂಡಾ 1 ಲಕ್ಷ ಲೀ.ಸಾಮಥ್ರ್ಯದ ಟ್ಯಾಂಕ್ ನಿರ್ಮಾಣಗೊಂಡು ಸಂಗಬೆಟ್ಟುವಿನಿಂದ ಬಂಟ್ವಾಳ -ಮೂಡುಬಿದ್ರೆ ರಸ್ತೆ ಬದಿ 250 ಮಿ.ಮೀ. ವ್ಯಾಸ ಹೊಂದಿರುವ ಸಿಮೆಂಟ್ ಪೈಪ್ ಅಳವಡಿಸುವ ಕಾಮಗಾರಿಯೂ ಬಹುತೇಕ ಅಂತಿಮ ಹಂತದಲ್ಲಿದೆ. ಇದೇ ಮಾರ್ಚ್ ತಿಂಗಳ ಅಂತ್ಯದೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸುವುದಾಗಿ ಮೊಗರೋಡಿ ಕನ್ಸ್ಟ್ರಕ್ಷನ್ಸ್ ಸಂಸ್ಥೆ ಗುತ್ತಿಗೆದಾರ ಸುಧಾಕರ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಈ ಯೋಜನೆ ಯಶಸ್ವಿಗೊಂಡಲ್ಲಿ ಇಲ್ಲಿನ ಸಂಗಬೆಟ್ಟು ಮಾತ್ರವಲ್ಲದೆ, ಚೆನ್ನೈತ್ತೋಡಿ, ಕುಕ್ಕಿಪಾಡಿ, ರಾಯಿ, ಪಂಜಿಕಲ್ಲು, ಅರಳ, ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರಿದಂತೆ ಕಳ್ಳಿಗೆ ಗ್ರಾಮದ ಒಂದು ಭಾಗ ಸಹಿತ ಒಟ್ಟು 16 ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಎಂಜಿನಿಯರ್ ಗಿರೀಶ್ ತಿಳಿಸಿದ್ದಾರೆ.
ಹೊಸ ಅಣೆಕಟ್ಟೆ:
ತಾಲ್ಲೂಕಿನ ಪುಚ್ಚಮೊಗರು-ಅರಳ-ಪೊಳಲಿ ಮೂಲಕ ಮಂಗಳೂರು ಕಡೆಗೆ ಸಾಗುವ ಫಲ್ಗುಣಿ ಹೊಳೆಗೆ ಅರಳ ಗ್ರಾಮದ ಮುಲ್ಲಾರಪಟ್ನ ಸಮೀಪದ ಮುಚ್ಚೂರು ಎಂಬಲ್ಲಿ ಈಗಾಗಲೇ ಯಶಸ್ವಿಯಾಗಿ ನಿರ್ಮಾಣಗೊಂಡ ತೂಗು ಸೇತುವೆ ಬಳಿ ರೂ 4.85ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಮತ್ತೆ 2ಮೀ. ಎತ್ತರದ ಹೊಸ ಅಣೆಕಟ್ಟೆ ನಿರ್ಮಿಸಲು ಇಲಾಖೆ ಮುಂದಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆದೇಶ ಹಂತದಲ್ಲಿದೆ. ಈ ಅಣೆಕಟ್ಟೆಯಿಂದ ಇಲ್ಲಿನ ಸುಮಾರು ಆರೇಳು ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಿಂದ ಕೃಷಿಕರು ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಹಕಾರಿಯಾಗಲಿದೆ. ಇನ್ನೊಂದೆಡೆ ಅಣೆಕಟ್ಟೆ ಮೇಲ್ಭಾಗದಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡುವ ಮೂಲಕ ಬಂಟ್ವಾಳ ಮತ್ತು ಮಂಗಳೂರು ತಾಲ್ಲೂಕಿನ ಎರಡು ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಲಿದೆ ಎಂಬ ಅಭಿಪ್ರಾಯ ಇಲಾಖೆ ಎಂಜಿನಿಯರ್ ಷಣ್ಮುಗಂ ಅವರಿಂದ ವ್ಯಕ್ತವಾಗಿದೆ. -ಮೋಹನ್ ಕೆ.ಶ್ರೀಯಾನ್ ರಾಯಿ

By suddi9

Leave a Reply

Your email address will not be published. Required fields are marked *