ಬಂಟ್ವಾಳ: ನಾಟಕವು ಪ್ರಬಲ ಮಾಧ್ಯಮವಾಗಿದ್ದು ಸಮಾಜದ ಪರಿವರ್ತನೆಯ ಶಕ್ತಿ ಹೊಂದಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ|ಗಣೇಶ್ ಕಾರ್ಣಿಕ್ ಅವರು ಹೇಳಿದರು.
ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಹಾಗೂ ಮಡಂತ್ಯಾರು ಜೆ.ಸಿ.ಐ. ಇದರ ಸಂಯುಕ್ತಾಶ್ರಯದಲ್ಲಿ ದಿ| ಶಿಶಿರ್ ಕುಮಾರ್ ಪಿ.ಎಸ್ ಅವರ ಸ್ಮರಣಾರ್ಥ ಫೆ.26 ರಿಂದ ಮಾ.4 ರವರೆಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿರುವ ಅಂತರ್ ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಗೆ ಫೆ.26ರಂದು ರಾತ್ರಿ ಚಾಲನೆ ನೀಡಿ ಮಾತನಾಡಿದರು.
ಕೇವಲ ಮನೋರಂಜನೆಯಲ್ಲದೆ ನಾಟಕಕ್ಕೆ ಸಮಾಜದ ಓರೆಕೋರೆಗಳನ್ನು ತಿಳಿಯಪಡಿಸುವ ಮತ್ತು ತಿದ್ದುವ ಶಕ್ತಿ ಹೊಂದಿದ್ದು ಇದರ ಸದುಪಯೋಗವಾಗಬೇಕಿದೆ. ತುಳು ರಂಗಭೂಮಿಯಲ್ಲಿ ಹೊಸ ಅಲೆ ಮೂಡುವಂತಾಗಲು ನಾಟಕಕಾರರು,ಕಲಾವಿದರು ತಮ್ಮ ಚಿಂತನೆಯನ್ನು ವಿಸ್ತಾರಗೊಳಿಸಬೇಕು. ಮರಾಠಿ ರಂಗಭೂಮಿ ಮತ್ತು ಆಧುನಿಕ ರಂಗಭೂಮಿಯಲ್ಲಿ ನಡೆಯುತ್ತಿರುವ ಬದಲಾವಣೆ ಮತ್ತು ರಂಗ ಚಟುವಟಿಕೆಗಳು ತುಳು ರಂಗಭೂಮಿಯಲ್ಲಿಯೂ ಆಗಬೇಕಾಗಿದೆ ಎಂದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಮುಖ್ಯ ಅತಿಥಿಯಾಗಿ ಮಾತನಾಡಿ ಜಿಲ್ಲೆಯಲ್ಲಿ ರಂಗಾಯಣ ಸಂಸ್ಥೆ ಸ್ಥಾಪನೆಯಾಗಬೇಕು. ಆ ಮೂಲಕ ರಂಗ ಕಲಾವಿದರಿಗೆ,ತಂತ್ರಜ್ಞರಿಗೆ ತರಬೇತಿ ದೊರಕುವುದರಿಂದ ರಂಗಭೂಮಿ ಚಟುವಟಿಕೆಗಳಿಗೆ ಕ್ರೀಯಾಶೀಲತೆ ವೃದ್ಧಿಯಾಗುವುದು. ಈ ನಿಟ್ಟಿನಲ್ಲಿ ಜನಪ್ರತಿನಿ„ಗಳು ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಬೇಕು ಎಂದರು.
ಶಿರ್ವ ಸೈಂಟ್ ಮೇರಿ ಕಾಲೇಜು ಪ್ರಾಂಶುಪಾಲ ಜೇಸಿ ರಾಜನ್ ವಿ.ಎನ್. ಅವರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಹರೀಂದ್ರ ಪೈ, ಲೋಕೇಶ್ ಆಚಾರ್ಯ, ಹೇಮಂತ್ ಕುಮಾರ್, ಎಪಿಎಂಸಿ ಸದಸ್ಯ ಹರೀಶ್ಚಂದ್ರ ಪೂಜಾರಿ, ಪಿಲಾತಬೆಟ್ಟು ಸೇ.ಸ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾ„ಕಾರಿ ಮಂಜಪ್ಪ ಮೂಲ್ಯ ಅತ್ತಾಜೆ,ಎಪಿಎಂಸಿ ಮಾಜಿ ಸದಸ್ಯ ರತ್ನಕುಮಾರ್ ಚೌಟ,ತಾ.ಪಂ.ಸದಸ್ಯ ರಮೇಶ ಪೂಜಾರಿ ಕುಡುಮೇರು, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ರಮೇಶ ಶೆಟ್ಟಿ ಮಜಲೋಡಿ,ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ,ಗೌರವಾಧ್ಯಕ್ಷ ಅಬ್ದುಲ ಪಿ.,ಕಾರ್ಯದರ್ಶಿ ಜಯರಾಜ ಅತ್ತಾಜೆ,ನಾಟಕೋತ್ಸವ ಸಂಚಾಲಕ ಎಚ್ಕೆ ನಯನಾಡು ಅವರು ಉಪಸ್ಥಿತರಿದ್ದರು.
ಇದೇ ವೇಳೆ ಭೂತಾರಾಧಕ ಗಿರಿಯಪ್ಪ ನಲ್ಕೆ ಅವರನ್ನು ಸಮ್ಮಾನಿಸಲಾಯಿತು.
ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ.ಅವರು ಸ್ವಾಗತಿಸಿದರು. ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಪ್ರಸ್ತಾವಿಸಿದರು. ಜೆಸಿಐ ಅಧ್ಯಕ್ಷ ರಾಜೇಶ್ ಪಿ.ವಂದಿಸಿದರು. ದಿನೇಶ್ ಸುವರ್ಣ ಕುದ್ಕೋಳಿ ಅವರು ಕಾರ್ಯಕ್ರಮ ನಿರೂಪಿಸಿದರು.

