ಮೂಡುಬಿದಿರೆ : ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಮಂಗಳೂರು ಭೇಟಿ ಪ್ರತಿಭಟಿಸಿ ವಿಶ್ವಹಿಂದೂ ಪರಿಷತ್ತು ಮತ್ತು ಹಿಂದೂ ಜಾಗರಣ ವೇದಿಕೆ ದ.ಕ. ಜಿಲ್ಲೆಯಾದ್ಯಂತ ಕರೆನೀಡಿದ್ದ ಹರತಾಳದ ಬಿಸಿ ಮೂಡುಬಿದಿರೆ ನಾಗರಿಕರಿಗೆ ತಟ್ಟಿದೆ. ಖಾಸಗಿ ಬಸ್ಗಳ ಓಡಾಟ ನಿಂತಿದ್ದರಿಂದ ಇಡೀ ನಗರ ಮಾತ್ರವಲ್ಲದೇ ಸುತ್ತಮುತ್ತಲ ಪ್ರದೇಶದ ಜನರಿಗೆ ತೊಂದರೆ ಅನುಭವಿಸುವಂತಾಯಿತು.

ಮೂಡುಬಿದಿರೆಯ ಮಾರುಕಟ್ಟೆ, ಹಳೆಯ ಮತ್ತು ಹೊಸ ಬಸ್ಸು ನಿಲ್ದಾಣ ಮತ್ತು ನಗರದ ವಿವಿದೆಡೆಗಳಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯದೇ ಇದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಯಿತು. ಬಸ್ ಸಂಚಾರ ಇದೆಯೋ ಇಲ್ಲವೋ ಎಂಬ ಸರಿಯಾದ ಮಾಹಿತಿ ಇಲ್ಲದೇ ಇದ್ದುದರಿಂದ ಪೇಟೆಗೆ ಬಂದಿದ್ದ ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಆಟೋ ರಿಕ್ಷಾಗಳನ್ನು ಅವಲಂಭಿಸಬೇಕಾಯಿತು.
ಎಲ್ಲಾ ಆಟೋ ಪಾರ್ಕ್ಗಳಲ್ಲಿ ಆಟೋಗಳು ಎಂದಿನಂತೆ ಕಾರ್ಯನಿರ್ವಹಿಸಿವೆ. ಇದರ ಜೊತೆಗೆ ಆಸ್ಪತ್ರೆ ಹಾಗೂ ಔಷಧ ಮಳಿಗೆಗಳಿಗೆ ಬಂದ್ನ ನಡುವೆ ಕಾರ್ಯನಿರ್ವಹಿಸಿವೆ. ಶನಿವಾರ ಬೆಳಿಗ್ಗೆ ಕೆಲವು ಅಂಗಡಿಗಳು ಹಾಗೂ ಹೊಟೇಲುಗಳು ಎಂದಿನಂತೆ ಕಾರ್ಯನಿರ್ವಹಿಸಲು ತೆರೆದಿತ್ತಾದರೂ ಅದನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಂದ್ ಮಾಡುವಂತೆ ಸೂಚಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಗಳು ಇದ್ದಿದ್ದರಿಂದ ಆಯಾ ಶಾಲಾ ಬಸ್ಸುಗಳನ್ನು ಹೆಚ್ಚುವರಿಯಾಗಿ ಗ್ರಾಮಾಂತರ ಪ್ರದೇಶಗಳಿಗೆ ಓಡಿಸಿ ತಮ್ಮ ತಮ್ಮ ವಿದ್ಯಾರ್ಥಿಗಳನ್ನು ಕಾಲೇಜಿಗೆ ಬರುವಂತೆ ನೋಡಿಕೊಂಡವು. ಇದಲ್ಲದೆಯೂ ಗ್ರಾಮಂತರ ಪ್ರದೇಶದ ವಿದ್ಯಾರ್ಥಿಗಳು ಖಾಸಗಿ ವಾಹನಗಳು ಹಾಗೂ ಆಟೋ ರಿಕ್ಷಾಗಳನ್ನು ಬಳಸಿಕೊಂಡು ಕಾಲೇಜು ತಲುಪಿದರು.
ಮೂಡುಬಿದಿರೆ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತು ಹಾಕಲಾಗಿತ್ತು. ಅಲ್ಲಲ್ಲಿ ಪೊಲೀಸ್ ವಾಹನಗಳ ತಿರುಗಾಟದಿಂದ ಸಾರ್ವಜನಿಕರಿಗೆ ರಕ್ಷಣೆಯ ಅಭಯ ದೊರಕಿದಂತಾಗಿತ್ತು.
ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ಶಿರ್ತಾಡಿ, ಬೆಳುವಾಯಿ ಪ್ರದೇಶಗಳಲ್ಲೂ ಬಂದ್ನ ವಾತಾವರಣ ಕಂಡುಬಂದಿದೆ. ಉಳಿದಂತೆ ಇತರ ಖಾಸಗಿ ವಾಹನಗಳು ಅಧಿಕವಾಗಿ ಎಂದಿನಂತೆ ಸಂಚರಿಸುತ್ತಿದ್ದವು. ಮೂಡುಬಿದಿರೆಯ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಎಂದಿನಂತೆ ಆಗಮಿಸಿದ ಮುಂಬೈ ಹಾಗೂ ದೂರದೂರುಗಳಿಗೆ ತೆರಳುವ ಬಸ್ಸುಗಳು ಆಗಮಿಸಿ ತಮ್ಮ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೋಡಿಕೊಂಡಿವೆ.

