ಬಂಟ್ವಾಳ: ಇಲ್ಲಿನ ಬಿ.ಸಿ.ರೋಡ್ ಸಮೀಪದ ತಲಪಾಡಿ ನೇತ್ರಾವತಿ ನದಿಯಲ್ಲಿ ಕೊಳೆತ ಅಪರಿಚಿತ ಶವವೊಂದು ಬುಧವಾರ ಪತ್ತೆಯಾಗಿದ್ದು, ಇದನ್ನು ಸ್ಥಳಾವಕಾಶ ಕೊರತೆ ನೆಪದಲ್ಲಿ ವೆನ್‍ಲಾಕ್ ಶವಾಗಾರದಿಂದ ವಾಪಾಸು ಕಳುಹಿಸಿದ ಘಟನೆ ನಡೆದಿದೆ.
ಇಲ್ಲಿನ ತುಂಬೆ ಹೊಸ ಅಣೆಕಟ್ಟೆಯಲ್ಲಿ ಐದು ಮೀ. ಎತ್ತರಕ್ಕೆ ನೀರು ಸಂಗ್ರಹಗೊಂಡ ಪರಿಣಾಮ ಬುಧವಾರ ಬೆಳಿಗ್ಗೆ ಇಲ್ಲಿಗೆ ಸಮೀಪದ ತಲಪಾಡಿ ಮರಳು ಕಟ್ಟೆ ಎಂಬಲ್ಲಿ ಗಂಡಸಿ ಶವವೊಂದು ನೀರಿನಲ್ಲಿ ತೇಲುತ್ತಿರುವುದನ್ನು ಸ್ಥಳೀಯ ನಿವಾಸಿ ಸಮದ್ ಮತ್ತಿತರರು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ತಕ್ಷಣವೇ ನಗರ ಠಾಣೆ ಪೊಲೀಸರು ಧಾವಿಸಿ ಬಂದು ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಸಹಕಾರದಲ್ಲಿ ಸುಮಾರು 45ರಿಂದ 50ರ ಹರೆಯದ ಕಪ್ಪು ಪ್ಯಾಂಟು ಧರಿಸಿದ್ದ ಅಪರಿಚಿತ ಗಂಡಸಿನ ಕೊಳೆತ ಶವವನ್ನು ಮೇಲೆತ್ತಿ ಮಂಗಳೂರು ವೆನ್‍ಲಾಕ್ ಶವಾಗಾರಕ್ಕೆ ಕಳುಹಿಸಿದ್ದಾರೆ. ಆದರೆ ಇಲ್ಲಿನ ಶವಾಗಾರದಲ್ಲಿ ಸ್ಥಳಾವಕಾಶ ಕೊರತೆ ನೆಪದಲ್ಲಿ ಶವವನ್ನು ಅಲ್ಲಿಂದ ವಾಪಾಸು ಕಳುಹಿಸಿರುವುದು ಪೊಲೀಸರಿಗೆ ಸಂಕಟ ತಂದಿದೆ. ನಗರ ಠಾಣಾಧಿಕಾರಿ ನಂದ ಕುಮಾರ್ ನೇತೃತ್ವದ ಪೊಲೀಸರು ಮತ್ತೆ ಶವವನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಖಾಸಗಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸುವಲ್ಲಿ ಯಶಸ್ವಿಯಾದರು. ಈ ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದವರು ಕೂಡಲೇ ನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08255-232111 ಇವರನ್ನು ಸಂಪರ್ಕಿಸುವಂತೆ ಅವರು ವಿನಂತಿಸಿಕೊಂಡಿದ್ದಾರೆ.

