ಮೂಡುಬಿದಿರೆ: ಭಾಗವತಿಕೆಯಲ್ಲಿ ಓಘ, ಸ್ಪಷ್ಟತೆ, ಮತ್ತು ಗೇಯತೆ ಅಗರಿಯವರ ವಿಶೇಷತೆಯಾಗಿತ್ತು. ಪ್ರಸಂಗದ ಜತೆ ಪರಂಪರೆಯೂ ಮುಖ್ಯ ಎನ್ನುವ ಮೂಲಕ ಭಗವಂತನಿಗಾಗಿ ಭಕ್ತಿಯಿಂದ ಹಾಡಿದ ಭಾಗವತ ಅಗರಿಯವರಾಗಿದ್ದಾರೆ ಎಂದು ಇಲ್ಲಿನ ಶ್ರೀ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು. ಅವರು ರವಿವಾರ ಸಂಜೆ ಸುರತ್ಕಲ್‍ನ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣ ವೇದಿಕೆ ಹಾಗೂ ಗೋವಿಂದದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ `ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ-ಸನ್ಮಾನ-ಅಗರಿ ಸಪ್ತಸ್ವರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

agari

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಮಾತನಾಡಿ ದಂತಕತೆಯಾದ ಅಗರಿಯವರ ಸಂಸ್ಮರಣೆ ದೇವಿಮಹಾತ್ಮೆ ಯಕ್ಷಗಾನ ಆಗುವಲ್ಲೆಲ್ಲ ನಡೆದಂತೆಯೇ. ಕರ್ನಾಟಕ ಶಾಸ್ತ್ರೀಯ ಮತ್ತು ಹಿಂದೂಸ್ತಾನಿ ಸಂಗೀತವನ್ನು ಭಾಗವತಿಕೆಗೆ ಅಳವಡಿಸಿದ ಕೀರ್ತಿ ಅವರದ್ದು ಎಂದರು. ಪ್ರಸಂಗಕರ್ತ,ಸ್ತ್ರೀ ಪಾತ್ರಧಾರಿ ಎಂ.ಕೆ. ರಮೇಶ ಆಚಾರ್ಯ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಡಾ. ಎಂ. ಪ್ರಭಾಕರ ಜೋಷಿ ಅಗರಿ ಸಂಸ್ಮರಣಾ ಮಾತುಗಳನ್ನಾಡಿ ಅವರ ಭಾಗವತಿಕೆಯಲ್ಲಿದ್ದ ಸಪ್ತಸ್ವರ ಒಂದು ಸ್ಪರ್ಧಾತ್ಮಕ ವಿಷಯ. ನೂರಾರು ಪ್ರಸಂಗಗಳನ್ನು ಬಾಯಿಪಾಠ ಇಟ್ಟುಕೊಂಡಿದ್ದ ಅಗರಿಯವರ ಪ್ರೀತಿಯಂತೆ ಕೋಪವೂ ಸಾತ್ವಿಕವಾಗಿದ್ದ ಯುಗಪುರುಷ ಎಂದರು.

ಅಭಿನಂದನಾ ಮಾತುಗಳನ್ನಾಡಿದ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಪಿ.ಕಿಶನ್ ಹೆಗ್ಡೆ ರಮೇಶ್ ಆಚಾರ್ಯರು ಸ್ವಂತ ಪ್ರಸಂಗಗಳಿಂದ ಗುರುತಿಸಿಕೊಂಡ ಪ್ರತಿಭೆ. ಬಡಗುತಿಟ್ಟಿನ ಎಲ್ಲ ಪ್ರಸಂಗಗಳಿಗೆ ಪದ್ಯ ಬರೆದವರು ಅವರು. ಹಿರಿಯ ಭಾಗವತರುಗಳು ಮೆಚ್ಚುವ ಪದ್ಯರಚನೆ ಅವರಿಂದಾಗಿದೆ ಎಂದರು. ಸರಕಾರದ ವತಿಯಿಂದ ಅಗರಿಯವರ ಸಾಕ್ಷ್ಯಚಿತ್ರ ದಾಖಲೀಕರಣದ ಬಗ್ಗೆ ಅವರು ಭರವಸೆ ನೀಡಿದರು.

ಉದ್ಯಮಿ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಅಗರಿ ರಾಘವೇಂದ್ರ ರಾವ್ ಸ್ವಾಗತಿಸಿದರು. ಅಗರಿ ರಘುರಾಮ ರಾವ್ ದಿನೇಶ್ ರಾವ್ ಭಾಸ್ಕರ್ ರಾವ್,ಅಗರಿ ವಾದಿರಾಜ ರಾವ್, ಶ್ರೀನಿವಾಸ ರಾವ್ ಅತಿಥಿಗಳನ್ನು ಗೌರವಿಸಿದರು. ಸಂಸ್ಮರಣ ಸಮಿತಿ ಅದ್ಯಕ್ಷ  ಪರಮೇಶ್ವರ ಐತಾಳ್ ಪ್ರಾಸ್ತಾವಿಕ ಮಾತುಗಳ್ನಾಡಿದರು. ಕಾರ್ಯದರ್ಶಿ ಪ್ರೊ.ಕೃಷ್ಣಮೂರ್ತಿ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *