ಉಡುಪಿ: ಮಣಿಪಾಲ ವಿವಿ ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜುಲೈ 19ಕ್ಕೆ ಮುಂದೂಡಿದೆ.

ಮಂಗಳವಾರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಶಂಕರ್ ಬಿ.ಅಮರಣ್ಣವರ ಅವರು 17 ಸಾಕ್ಷಿಗಳ ವಿಚಾರಣೆಗೆ ಸಂಬಂಧಪಟ್ಟಂತೆ ಹೈಕೋರ್ಟ್ ಆದೇಶದ ಪ್ರತಿಯನ್ನು ಆರೋಪಿಗಳ ಪರ ವಕೀಲರು ಸಲ್ಲಿಸದ ಕಾರಣ ವಿಚಾರಣೆಯನ್ನು ಜು.19ಕ್ಕೆ ಮುಂದೂಡಿದರು. ಈ 17ಸಾಕ್ಷಿಗಳನ್ನು ಹೊರತು ಪಡಿಸಿ ಉಳಿದ 62 ಸಾಕ್ಷಿಗಳಲ್ಲಿ 61 ಸಾಕ್ಷಿಗಳ ವಿಚಾರಣೆ ಈಗಾಗಲೇ ಪೂರ್ಣಗೊಂಡಿದೆ. ಪ್ರಕರಣದ ತನಿಖಾಧಿಕಾರಿಯ ಹೇಳಿಕೆ ಪಡೆಯುವುದೊಂದೇ ಬಾಕಿಯಿತ್ತು. ಈ ನಡುವೆ ವಿಚಾರಣೆಗೆ ಪರಿಗಣಿಸದ 17 ಸಾಕ್ಷಿಗಳನ್ನು ಕೂಡಾ ವಿಚಾರಣೆಗೆ ಒಳಪಡಿಸಬೇಕು ಎಂದು ಕೋರಿ ಆರೋಪಿಗಳ ಪರ ವಕೀಲರು ಹೈಕೋರ್ಟ್ ಮೆಟ್ಟಲೇರಿದ್ದರು. ಹೈಕೋರ್ಟ್ ಈ ವಾದವನ್ನು ಪುರಸ್ಕರಿಸಿತ್ತು. ಆದರೆ ಹೈಕೋರ್ಟ್ ಆದೇಶವನ್ನು ಆರೋಪಿಗಳ ಪರ ವಕೀಲರು ಜಿಲ್ಲಾ ನ್ಯಾಯಾಲಯಕ್ಕೆ ಮಂಗಳವಾರ ಸಲ್ಲಿಸದ ಕಾರಣ ಇದೀಗ ಮುಂದಿನ ವಿಚಾರಣೆಯನ್ನು ಜು.19ಕ್ಕೆ ನಿಗದಿ ಪಡಿಸಲಾಗಿದೆ. ಕಳೆದ ಜು 1ರಂದು ವಿಚಾರಣೆಯನ್ನು ಇದೇ ಕಾರಣದಿಂದಾಗಿ ಜುಲೈ 8ಕ್ಕೆ ಮುಂದೂಡಲಾಗಿತ್ತು.

ಮಂಗಳವಾರ ಪ್ರಕರಣದ ಪ್ರಮುಖ ಮೂವರು ಆರೋಪಿಗಳಾದ ಯೋಗೀಶ್, ಹರೀಶ್ಚಂದ್ರ ಹಾಗೂ ಅನಂದ ಹಾಗೂ ಸಾಕ್ಷ ನಾಶ ಪ್ರಕರಣದ ಆರೋಪಿಗಳಾದ ಬಾಲಚಂದ್ರ ಮತ್ತು ಹರೀಶ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

By suddi9

Leave a Reply

Your email address will not be published. Required fields are marked *