ಬೆಂಗಳೂರು: “ಮಾಸ್ತಿಗುಡಿ’ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರು ಖಳನಟರು ಮೃತಪಟ್ಟ ದುರಂತ ಮರೆಯುವ ಮುನ್ನವೇ ಸಿನಿಮಾ ಶೂಟಿಂಗ್ ವೇಳೆ ಸಹನಟಿಯೊಬ್ಬರು ಸಾವನ್ನಪ್ಪಿದ ಮತ್ತೂಂದು ಘಟನೆ ಸೋಮವಾರ ನಡೆದಿದೆ.
ಯಲಹಂಕ ಸಮೀಪ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ “ವಿಐಪಿ’ ಸಿನಿಮಾ ಚಿತ್ರೀಕರಣ ವೇಳೆ ಸಹ ನಟಿ ಪದ್ಮಾವತಿ (45) ಎಂಬುವವರು ಮೃತಪಟ್ಟಿದ್ದು, ಈ ಘಟನೆಗೆ ಕಾರಣ ನಿಗೂಢವಾಗಿದೆ. ಸಹ ನಟಿ ಮೃತಪಟ್ಟಿರುವ ಸಂಗತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ “ಉದಯವಾಣಿ’ಗೆ ಖಚಿತಪಡಿಸಿದ್ದಾರೆ.
ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಕೂಲಿ ಕಾರ್ಮಿಕರ ಸನ್ನಿವೇಶ ಚಿತ್ರೀಕರಣ ಸಂದರ್ಭದಲ್ಲಿ ಆಯತಪ್ಪಿದ ಪದ್ಮಾವತಿ, ಲಿಫ್ಟ್ ಅಳವಡಿಕೆ ತೋಡಲಾಗಿದ್ದ ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ. ಸಂಜೆ ಚಿತ್ರೀಕರಣ ಮುಗಿದ ನಂತರ ಸಹಕಲಾವಿದರ ಎಣಿಕೆ ಪಡೆಯುವಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.
ಪದ್ಮಾವತಿ ಆಯತಪ್ಪಿ ಬಿದ್ದರೇ ಅಥವಾ ಬೇರೆ ಕಾರಣಗಳೇನಾದರೂ ಇವೆಯೇ ಎಂಬ ದಿಸೆಯಲ್ಲಿ ಪೊಲೀಸ್ ತನಿಖೆ ನಡೆದಿದೆ. ಮೃತ ಪದ್ಮಾವತಿ ಅವರು ಹಲವು ದಿನಗಳಿಂದ ಸಹ ಕಲಾವಿದರಾಗಿ ನಟಿಸುತ್ತಿದ್ದು, ಜಕ್ಕೂರು ಲೇಔಟ್ನಲ್ಲಿ ಅವರು ಕುಟುಂಬದ ಜತೆ ವಾಸವಾಗಿದ್ದರು. ಕಳೆದ ಮೂರು ದಿನಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅವರು, ದಿನಗೂಲಿ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಈ ಘಟನೆ ಸಂಬಂಧ ರಾಜಾನುಕುಂಟೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ಎರಡನೇ ಚಿತ್ರ “ವಿಐಪಿ’ ಆಗಿದ್ದು, ಈ ಸಿನಿಮಾಗೆ ನಂದಕಿಶೋರ್ ನಿರ್ದೇಶಕರಾಗಿದ್ದಾರೆ. ಕಳೆದ ಮೂರು ದಿನಗಳಿಂದ ಯಲಹಂಕ ಹತ್ತಿರದ ಆವಲಹಳ್ಳಿಯಲ್ಲಿ ಪ್ರಸ್ಟೀಜ್ ಗ್ರೂಪ್ಗೆ ಸೇರಿದ ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಕಟ್ಟಡದಲ್ಲಿ ಕೂಲಿ ಕಾರ್ಮಿಕನಾಗಿ ನಾಯಕ ನಟ ಕೆಲಸ ಮಾಡುವ ಸನ್ನಿವೇಶದ ಚಿತ್ರೀಕರಣ
ಮಾಡಲಾಗುತ್ತಿತ್ತು. 150ಕ್ಕೂ ಅಧಿಕ ಸಹ ಕಲಾವಿದರು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.
ಅಲ್ಲಿ ಪದ್ಮಾವತಿ ಸೇರಿದಂತೆ 150ಕ್ಕೂ ಅಧಿಕ ಸಹ ಕಲಾವಿದರು ಪಾಲ್ಗೊಂಡಿದ್ದರು. ಈ ವೇಳೆ ನಾಲ್ಕನೇ ಅಂತಸ್ತಿನಲ್ಲಿ ಪದ್ಮಾವತಿ ನಿಂತಿದ್ದರು. ಆಗ ಆಯ ತಪ್ಪಿ ಲಿಫ್ಟ್ ಅಳವಡಿಕೆಗೆ ತೋಡಿದ್ದ ಬೃಹತ್ಗೆ ಗುಂಡಿಗೆ ಅವರು ಬಿದ್ದಿದ್ದಾರೆ. ಮಧ್ಯಾಹ್ನ ಶೂಟಿಂಗ್ ಮುಗಿಸಿದ ಚಿತ್ರನಟ ತಂಡವು, ಸಹಕಲಾವಿದರಿಗೆ ದಿನಗೂಲಿ ನೀಡಲು ಎಣಿಕೆ ಪಡೆಯುವಾಗ ಒಬ್ಬರು ನಾಪತ್ತೆಯಾಗಿರುವ ವಿಚಾರ ಗೊತ್ತಾಗಿದೆ.
ತಕ್ಷಣವೇ ಅವರು, ಕಟ್ಟಡದ ಆವರಣದಲ್ಲಿ ಹುಡುಕಾಡಿದಾಗ ಲಿಫ್ಟ್ ಗುಂಡಿಯಲ್ಲಿ ಪದ್ಮಾವತಿ ಮೃತದೇಹ ಪತ್ತೆಯಾಗಿದೆ.
ಕೃಪೆ: ಉದಯವಾಣಿ

