ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂ ವತಿಯಿಂದ ಕರಿಕುಮೇರಿನಲ್ಲಿ 14 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನ ಮಂತ್ರಿ ಅವರ ಸ್ವಚ್ಛ ಭಾರತದ ಕಲ್ಪನೆಯ ಕನಸನ್ನು ನನಸಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣಗಳಿಗೆ ಹೆಚ್ಚಿನ ಪ್ರಾಧನ್ಯತೆಯನ್ನು ನೀಡಲಾಗುತ್ತಿದ್ದು ಜಿ.ಪಂನಿಂದ 20 ಲಕ್ಷ ಅನುದಾನವನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ದ.ಕ ಜಿಲ್ಲೆಯ ವ್ಯಾಪ್ತಿಯ ಪಂಚಾಯಿತಿಗಳಲ್ಲಿ ನಿರ್ಮಾಣಗೊಂಡಿರುವ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿರುವ ಪಂಚಾಯಿತಿಗಳಿಗೆ ಅಭಿನಂದಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ತೆಂಕಮಿಜಾರು ಪಂಚಾಯತ್ ವತಿಯಿಂದ ಅತ್ಯಂತ ಉತ್ತಮವಾಗಿ ನಿರ್ಮಾಣಗೊಳ್ಳುತ್ತಿರುವ ಘಟಕವನ್ನು ಪ್ರಶಂಸಿಸಿದರು. ಅಲ್ಲದೆ ಘಟಕಗಳ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳದಿರುವ ಪಂಚಾಯಿತಿಗಳಿಗೆ ಎಚ್ಚರಿಕೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಪಿಡಿಓ ಸಾಯೀಶ ಚೌಟ ಮಾತನಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡದಲ್ಲಿ ಒಟ್ಟು 7 ಕೋಣೆಗಳಾಗಿ ನಿರ್ಮಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಒಂದು ಕೋಣೆಯನ್ನು ಮೀಸಲಿಡಲಾಗುತ್ತಿದೆ. ಉಳಿದಂತೆ ಇತರ ಒಣ ಮತ್ತಯ ಹಸಿ ತ್ಯಾಜ್ಯಗಳನ್ನು ಇನ್ನಿತರ ಕೋಣೆಗಳಲ್ಲಿ ತುಂಬಿಸಿಲಾಗುತ್ತದೆ. ತ್ಯಾಜ್ಯಗಳು ಗೊಬ್ಬರವಗಿ ಮಾರ್ಪಾಡಾದ ನಂತರ ಕೃಷಿಕರಿಗೆ ಮಾರಾಟ ಮಾಡಲಾಗುವುದೆಂದು ತಿಳಿಸಿದರು.
ಜಿ.ಪಂ ಸ್ಥಾಯಿ ಸಮಿತಿ ಸದಸ್ಯ ಜನಾರ್ಧನ ಗೌಡ, ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಸದಸ್ಯರಾದ ರಮೇಶ್ ಶೆಟ್ಟಿ ಮರಿಯಡ್ಕ, ಕರುಣಾಕರ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಜಿ.ಪಂ ಇಂಜಿನಿಯರ್ ವಿಶ್ವನಾಥ, ಪಿಡಿಓ ಸಾಯೀಶ ಚೌಟ, ಗುತ್ತಿಗೆದಾರ ಅರುಣ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

